ಹುಬ್ಬಳ್ಳಿ: ಪ್ರತಿ ಟನ್ ಕಬ್ಬಿಗೆ ಗೆ ಕನಿಷ್ಠ 5,500 ರೂ. ಬೆಂಬಲ ಬೆಲೆ ನೀಡಲು ಒತ್ತಾಯಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯಾಗಿ ಹುಬ್ಬಳ್ಳಿಯ ರೈತರು, ನಗರದಲ್ಲಿ ಶನಿವಾರ ಮಾನವ ಸರಪಳಿ ನಿರ್ಮಿಸಿ, ಸಂಚಾರ ತಡೆದು ಪ್ರತಿಭಟಿಸಿದರು.
ಹಳೇ ಹುಬ್ಬಳ್ಳಿ ಬಸವೇಶ್ವರ ರೈತ ಸಂಘ ಸೇರಿದಂತೆ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಹಳ್ಳಿಗಳಿಂದ ಆಗಮಿಸಿದ್ದ ರೈತರು, ಹಳೇ ಹುಬ್ಬಳ್ಳಿ ಭಾಗದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ಗೊಳಿಸುವಂತೆ ವ್ಯಾಪಾರಸ್ಥರಲ್ಲಿ ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಕೆಲ ವ್ಯಾಪಾರಿಗಳು, ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರು. ಕೆಲ ವ್ಯಾಪಾರಿಗಳು ವಿರೋಧಿಸಿದ್ದಕ್ಕೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯ ಪ್ರವೇಶದಿಂದ ಶಾಂತಗೊಂಡಿತು. ನಂತರ ಮೆರವಣಿಗೆ ಮೂಲಕ ದುರ್ಗದಬೈಲ್, ಚನ್ನಪೇಟೆ, ಗೌಳಿಗಲ್ಲಿ ದಾಟಿ ಇಂಡಿಪಂಪ್ ವೃತ್ತಕ್ಕೆ ಆಗಮಿಸಿ, ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ರೈತ ಮುಖಂಡ ವೀರಯ್ಯಸ್ವಾಮಿ ಸಾಲಿಮಠ ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ರಾಜ್ಯ ಸರ್ಕಾರಕ್ಕೆ ರೈತರಿಗೆ ಪ್ರೋತ್ಸಾಹಧನ ನೀಡಲು ಸಾಧ್ಯವಾಗುತ್ತಿಲ್ಲ. ಎರಡು ತಿಂಗಳವರೆಗೆ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಿ, ಪ್ರತಿ ಟನ್ ಕಬ್ಬಿಗೆ 1,000 ರೂ. ಪ್ರೋತ್ಸಾಹಧನ ನೀಡಬೇಕು. ರಾಜ್ಯ ಸರ್ಕಾರ ತಕ್ಷಣವೇ ತನ್ನ ಪಾಲಿನ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ಕೆಜಿಗೆ 60 ರೂ.ಗೆ ಏರಿಸಬೇಕು. ಪೊಲೀಸರ ಮೂಲಕ ರೈತ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಶಿವಾನಂದಪ್ಪ ಹೊಸೂರ, ಬಸವರಾಜ ಹೊಸೂರ, ಮಂಜುನಾಥ ಕುಲಕರ್ಣಿ, ಜಗದೀಶ ಗಿರೆಮ್ಮನವರ, ನಾಗರಾಜ ಬಾಳಿಕಾಯಿ, ಚನ್ನಪ್ಪ ಅಂಗಡಿ, ಮಹೇಶ ಕುರಿಯವರ, ಹನುಮಂತ ಗಾಳಿ, ಗುರಣ್ಣ ರಾಯನಾಳ, ಮಂಜುನಾಥ ಕಾಟಕರ, ಮಾಲತೇಶ ಕಂಬಳಿ ಇತರರಿದ್ದರು.