ವಿದ್ಯಾ ಮಂಜುನಾಥ ಗೌಡರ 
ಧಾರವಾಡ

ಮಹಿಳೆ ಬಲಿ ಪಡೆದ ಮಂಜಾ ದಾರ

ಕುತ್ತಿಗೆ ಹರಿದು ತೀವ್ರ ರಕ್ತಸ್ರಾವ

ಹುಬ್ಬಳ್ಳಿ: ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆದೇಶ ಸರಿಯಾಗಿ ಪಾಲನೆಯಾಗಿದ್ದರೆ ಮಾಂಜಾ ದಾರದಿಂದ ಆಗುವ ಅನಾಹುತ ತಪ್ಪುತ್ತಿದ್ದವೆ? ಇಂಥ ಪ್ರಶ್ನೆ ಇಲ್ಲಿಯ ಭರತ್‌ನಗರ ನಿವಾಸಿ ವಿದ್ಯಾ ಮಂಜುನಾಥ ಗೌಡರ ಮೃತಪಟ್ಟ ನಂತರ ಹೆಚ್ಚಾಗುತ್ತಿವೆ.

ತಿಂಗಳ ಹಿಂದೆ ಮಹಿಳೆಯೊಬ್ಬರು ಮಾಂಜಾದಾರದಿಂದ ತೀವ್ರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ ಪೊಲೀಸ್ ಇಲಾಖೆ ಮಂಜಾ ದಾರ ಬಳಕೆ ಮಾಡದಂತೆ ಎಚ್ಚರಿಕೆ ನೀಡಿತ್ತು. ಆದರೂ ಮಾಂಜಾ ದಾರದಿಂದ ಗುರುವಾರ ಆದ ಸಾವಿನ ದುರ್ಘಟನೆಯೊಂದು ನಗರದ ಜನರನ್ನು ಮನ ಕಲಕುವಂತೆ ಮಾಡಿದೆ.

ಲ್ಯಾಬ್‌ಟೆಕ್ನೇಷಿಯನ್ ಆಗಿದ್ದ ಭರತ್ ನಗರದ ನಿವಾಸಿ ವಿದ್ಯಾ ಮಂಜುನಾಥ ಗೌಡರ (38) ಮಧ್ಯಾಹ್ನ 1ಗಂಟೆಗೆ ಕರ್ತವ್ಯ ನಿರ್ವಣೆಗೆ ಸ್ಕೂಟಿ ಮೇಲೆ ತೆರಳುತ್ತಿದ್ದರು. ಶಿವಶಂಕರ ಕಾಲನಿಯಲ್ಲಿ ಅಡ್ಡ ಬಂದ ಮಾಂಜಾ ದಾರ ಸೀದಾ ಕುತ್ತಿಗೆಗೆ ಹರಿದಿದೆ. ಅಲ್ಲಿಯೇ ರಕ್ತಸ್ರಾವವಾಗಿ ಬಿದ್ದಿದ್ದ ಅವರನ್ನು ಕೆಎಂಸಿಆರ್‌ಐಗೆ ಸಾಗಿಸಲಾಗಿತ್ತು. ತೀವ್ರ ರಕ್ತಸ್ರಾವದಿಂದ ಅದಾಗಲೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಕಟಿಸಿದ್ದರು. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಈ ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು.

ಏನಿದು ಮಂಜಾದಾರ?: ಗಾಳಿಪಟ ಹಾರಾಡಲು ಬಳಸುವ ದಾರ. ಇದು ನಿಷೇಧಿತ ದಾರ. ಈ ದಾರವನ್ನು ಬಳಕೆ ಮಾಡಿ ಗಾಳಿಪಟಕ್ಕೆ ಬಳಸಲಾಗುತ್ತಿದೆ. ಇದು ಬಹಳ ತೀಕ್ಷ್ಣವಾಗಿರುವುದರಿಂದ ದೇಹದ ಯಾವುದೇ ಭಾಗದಲ್ಲಿ ಬಿದ್ದರೂ ಗಾಯ, ರಕ್ತಸ್ರಾವ, ಸಾವು ಸಂಭವಿಸುತ್ತದೆ. ಈ ದಾರದಿಂದ ಪ್ರಾಣಿ, ಪಕ್ಷಿ ಹಾಗೂ ಮಾನವರೂ ಮೃತಪಡುತ್ತಾರೆ.

ಹಾಗಾಗಿಯೇ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯು ನೈಲಾನ್, ಸಿಂಥೆಟಿಕ್ ಹಾಗೂ ಗಾಜು ಅಥವಾ ಇತರ ವಸ್ತುಗಳಿಂದ ಲೇಪಿತ ಮಾಂಜಾ ದಾರವನ್ನು ಗಾಳಿಪಟ ಹಾರಿಸಲು ಬಳಕೆ ಮಾಡದಂತೆ ನಿಷೇಧ ಹೇರಿದೆ. ಆದಾಗ್ಯೂ ನಗರದಲ್ಲಿ ಬಳಕೆ, ಮಾರಾಟ, ಸಂಗ್ರಹ, ತಯಾರಿಕೆ ಜೋರಾಗಿ ನಡೆದಿದೆ. ಇಂಥವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವುದಾಗಿಯೂ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.