ಹುಬ್ಬಳ್ಳಿ: ಸದಾ ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರ ಒತ್ತಡ ನಿವಾರಣೆಗೆ ಕ್ರೀಡಾಕೂಟಗಳು ಅತ್ಯಗತ್ಯ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮನೋದೈಹಿಕ ಆರೋಗ್ಯ ವೃದ್ಧಿಯಾಗಲಿದೆ ಎಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.
ಹು-ಧಾ ಪೊಲೀಸ್ ಆಯುಕ್ತಾಲಯದಿಂದ ಇಲ್ಲಿಯ ಗೋಕುಲ ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಕವಾಯತ ಮೈದಾನದಲ್ಲಿ ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಪರಾಧಗಳ ತಡೆ, ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಸೇರಿದಂತೆ ವಿವಿಧ ಕೆಲಸದಲ್ಲಿ ಪೊಲೀಸರು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರು ಕಾರ್ಯನಿರ್ವಹಿಸಲು ಯಾವುದೇ ನಿಗದಿತ ಸಮಯವಿರುವುದಿಲ್ಲ. ಪೊಲೀಸರು ಒತ್ತಡದಲ್ಲೇ ಕಾರ್ಯನಿರ್ವಹಿಸುವರು. ಕರ್ತವ್ಯದ ನಡುವೆಯೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪೊಲೀಸ್ ಆಯುಕ್ತ ಭೂಷಣ ಬೋರಸೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸರದು ಬಹಳ ಒತ್ತಡದ ಕೆಲಸ. ಪ್ರತಿಯೊಬ್ಬರೂ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢರಾಗಿರಬೇಕು. ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಬೇಕು. ಜೀವನದಲ್ಲಿ ಸೋಲು -ಗೆಲುವು ಸಹಜ. ಗೆಲುವು ಸಿಗುವವರೆಗೂ ಸತತ ಪ್ರಯತ್ನ ಮಾಡಬೇಕು ಎಂದರು.
ಪರೇಡ ಕಮಾಂಡರ್ ಆರ್ಪಿಐ ನಾಗರಾಜ ಪಾಟೀಲ ನೇತೃತ್ವದಲ್ಲಿ ಉತ್ತರ ವಿಭಾಗ, ದಕ್ಷಿಣ ವಿಭಾಗ, ಮಹಿಳಾ ವಿಭಾಗ, ಸಿಎಆರ್ ವಿಭಾಗ, ಸಂಚಾರ ವಿಭಾಗ ಮತ್ತು ಧಾರವಾಡ ವಿಭಾಗ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು. ಮೂರು ಬಾರಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದ ಆರ್. ವೆಂಕಟೇಶ ನಾಯಕ ಅವರು ಕ್ರೀಡಾ ಜ್ಯೋತಿ ಬೆಳಗಿಸಿದರು.
ಡಿಸಿಪಿ ವಿಜಯಕುಮಾರ ತಳವಾರ, ಎಸಿಪಿಗಳಾದ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯಕ, ಪೊಲೀಸ ಇಲಾಖೆಯ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.
ನಿಖಿಲ್ ನಾಯಕ ಮತ್ತು ಪೂರ್ಣಿಮಾ ಕುಂಬಾರ ನಿರೂಪಿಸಿದರು. ಡಿಸಿಪಿ ಶ್ರುತಿ ಎನ್.ಎಸ್. ವಂದಿಸಿದರು.