ಹುಬ್ಬಳ್ಳಿ: ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಚಲನಚಿತ್ರ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ ಸೋಮವಾರ ಹುಬ್ಬಳ್ಳಿಗೆ ಆಗಮಿಸಿದರು.
ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಶಿವರಾಜಕುಮಾರ ಅವರನ್ನು ಇಲ್ಲಿಯ ಪದ್ಮಾ ಟಾಕೀಸ್ ಸರ್ಕಲ್‌ನಿಂದ ಅಪ್ಸರಾ ಚಿತ್ರಮಂದಿರದವರೆಗೆ ಸಾರೋಟದಲ್ಲಿ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿ, ಡೊಳ್ಳು ಬಾರಿಸುವ ಮೂಲಕ ಚಿತ್ರಮಂದಿರಕ್ಕೆ ಕರೆತರಲಾಯಿತು.
ಕೆಲಹೊತ್ತು ಅಪ್ಸರಾ ಚಿತ್ರಮಂದಿರದಲ್ಲಿ ‘ಬೇಲ್’ ಚಲನಚಿತ್ರ ವೀಕ್ಷಿಸಿದ ಶಿವರಾಜಕುಮಾರ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಬೇಲ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕುಟುಂಬ ಸಮೇತ ಚಿತ್ರ ವೀಕ್ಷಣೆ ಮಾಡಲಾಗುತ್ತಿದೆ. ಕಥೆ ಬಗ್ಗೆಯೂ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ನನ್ನ ವಿಭಿನ್ನ ನಟನೆಯಿಂದ ಜನರು ಖುಷಿಯಾಗಿದ್ದಾರೆ ಎಂದರು.
ನಿರ್ದೇಶಕ ಪವನ ಒಡೆಯರ್ ಮಾತನಾಡಿ, ವಿಭಿನ್ನ ಚಿತ್ರಕ್ಕಾಗಿ ಜನರು ನಿರೀಕ್ಷೆ ಮಾಡುತ್ತಿದ್ದರು. ಬೇಲ್ ಚಿತ್ರ ನೋಡಿ ಜನರು ಖುಷಿಯಾಗುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಭೂತಪೂರ್ವ ಯಶಸ್ಸು ಸಿಗುತ್ತಿದೆ. ಮತ್ತೊಂದು ಚಿತ್ರಕಥೆ ಬರೆಯುತ್ತಿದ್ದು, ಶೀಘ್ರವೇ ಜನರ ಮುಂದಿಡಲಿದ್ದೇನೆ ಎಂದರು.
ಬೇಲ್ ಚಿತ್ರದ ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ಹಿರಿಯ ನಟ ಶಿವರಾಜಕುಮಾರ ಅವರೊಂದಿಗೆ ನಟಿಸಿದ್ದು ನನ್ನ ಭಾಗ್ಯ. ಅವರ ಅನುಭವವನ್ನು ನಟನೆ ವೇಳೆ ನನಗೆ ಧಾರೆ ಎರೆದಿದ್ದಾರೆ. ಈ ಅನುಭವ ಜೀವನದ ಅಮೂಲ್ಯ ಕ್ಷಣ. ನನ್ನ ನಟನೆ ಬಗ್ಗೆಯೂ ಜನರಿಗೆ ಸಂತೋಷ ತರಿಸಿದೆ ಎಂದರು.
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಅವರು ಶಿವರಾಜಕುಮಾರ, ಪವನ ಒಡೆಯರ್, ದೀಕ್ಷಿತ್ ಶೆಟ್ಟಿ ಅವರನ್ನು ಕಂಬಳಿ ಹೊದಿಸಿ ಸನ್ಮಾನಿಸಿದರು.
ಅಪ್ಸರಾ ಚಿತ್ರಮಂದಿರದ ಮುಖ್ಯಸ್ಥ ಸಮರ್ಥ ರಾಯ್ಕರ್, ಉದ್ಯಮಿ ಗೌತಮ ಬಾಫಣಾ, ಮಂಜುನಾಥ ನೂಲ್ವಿ ಇತರರಿದ್ದರು.