ನಶಾ ಮುಕ್ತ ಭಾರತ ಅಭಿಯಾನ ನಿಮಿತ್ತ ನಟಿ ರಾಗಿಣಿ ದ್ವಿವೇದಿ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಭಾನುವಾರ ಜರುಗಿದ ಸೈಕ್ಲೋಥಾನ್‌ನಲ್ಲಿ ಭಾಗವಹಿಸಿದ್ದ ಜನರು. 
ಧಾರವಾಡ

‘ಫಿಟ್‌ನೆಸ್’ಗಾಗಿ ಸೈಕಲ್ ತುಳಿದರು, ಓಡಿದರು

ಹುಬ್ಬಳ್ಳಿ: ನಶಾ ಮುಕ್ತ ಭಾರತ ಅಭಿಯಾನ ನಿಮಿತ್ತ ನಗರದ ತೋಳನಕೆರೆ ಮುಂಭಾಗದಲ್ಲಿ ಭಾನುವಾರ 5 ಕಿ.ಮೀ. ಸೈಕ್ಲೋಥಾನ್, 5 ಕಿ.ಮೀ. ವಾಕಥಾನ್ ಏರ್ಪಾಟಾಗಿತ್ತು.

ಹುಬ್ಬಳ್ಳಿ ಬೈಸಿಕಲ್ ಕ್ಲಬ್, ಫಿಟ್ ಇಂಡಿಯಾ, ಹುಬ್ಬಳ್ಳಿ ಫಿಟ್‌ನೆಸ್ ಫೌಂಡೇಷನ್, ಸಾಯಿ ಸಂಸ್ಥೆ, ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಮೂವ್‌ಮೆಂಟ್‌ಅಡಿಯ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಜೆನೆಕ್ಟ್ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಸೈಕ್ಲೋಥಾನ್ ಮತ್ತು ವಾಕಥಾನ್ ನಡೆಯಿತು. ಫಿಟ್ ಇಂಡಿಯಾ ಚಾಂಪಿಯನ್, ನಟಿ ರಾಗಿಣಿ ದ್ವಿವೇದಿ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ-ಯುವತಿಯರು ಭಾಗವಹಿಸಿದ್ದರು.

ತೋಳನಕೆರೆ ಮುಂಭಾಗದಿಂದ ಹೊರಟ ಸೈಕ್ಲೋಥಾನ್, ವಾಕಥಾನ್ ಟೆಂಡರ್‌ಶ್ಯೂರ್ ರಸ್ತೆ ಮಾರ್ಗವಾಗಿ ಓಕ್ಸ್ ಹೋಟೆಲ್‌ವರೆಗೆ ತೆರಳಿ, ಮತ್ತದೇ ಮಾರ್ಗವಾಗಿ ತೋಳನಕೆರೆ ಮುಂಭಾಗದಲ್ಲಿ ಸೇರಿದರು. ಭಾಗವಹಿಸಿದ್ದವರೆಲ್ಲರಲ್ಲಿಯೂ ಉತ್ಸಾಹ ಮೇರೆ ಮೀರಿತ್ತು.

ಚಾಲನೆ ನೀಡಿ ಮಾತನಾಡಿದ ನಟಿ ರಾಗಿಣಿ, ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆ. ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಜೀವನಶೈಲಿಯ ಭಾಗವನ್ನಾಗಿಸಿಕೊಳ್ಳಬೇಕು. ಹಾಗಾಗಿಯೇ ಸಾರ್ವಜನಿಕರನ್ನು ಪ್ರೇರೇಪಿಸಲು ಸೈಕ್ಲೋಥಾನ್, ವಾಕಥಾನ್ ಆಯೋಜಿಸಲಾಗಿದೆ. ಎಲ್ಲರೂ ನಿತ್ಯವೂ ಇಂಥ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಎಂಎಲ್‌ಸಿ ಲಿಂಗರಾಜ ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಿದು. ಯುವ ಸಮುದಾಯ ಆರೋಗ್ಯದಿಂದ ಇರಬೇಕೆಂಬ ದೃಢ ಸಂಕಲ್ಪ ಅವರದು. ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದರೆ, ದೇಶ ಬಲಿಷ್ಠವಾಗಿರುತ್ತದೆ ಎಂಬ ಸದಾಶಯ ಅವರಲ್ಲಿದೆ. ಹಾಗಾಗಿಯೇ ಇಂಥ ಕಾರ್ಯಕ್ರಮಗಳ ಮೂಲಕ ದೇಶವನ್ನು ಗಟ್ಟಿಗೊಳಿಸುತ್ತಿದ್ದಾರೆ ಎಂದರು.

ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಅಧ್ಯಕ್ಷ ಶೆಟ್ಟೆಪ್ಪ ಫಿರಂಗಿ, ಕಾರ್ಯದರ್ಶಿ ಶಿವಾನಂದ ದಂಡಾವತಿಮಠ, ಆನಂದ ಪಟ್ಟಣಶೆಟ್ಟಿ, ಡಾ. ಅರುಣ ಯಳಮಲಿ, ಅಕ್ಷಯ ಬಳ್ಳಾರಿ, ಡಾ. ಸಚಿನ್ ಹೊಸಕಟ್ಟಿ, ಕಿರಣ ಉಪ್ಪಾರ, ವಿಶಾಲ ನಾಡಗೌಡರ ಇತರರಿದ್ದರು. ಆರ್‌ಜೆ ರಷೀದ್ ನಿರೂಪಿಸಿದರು.