ಧಾರವಾಡ: ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆ ಮತ್ತು ನಿಗಮ ಮಂಡಳಿಗಳಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆಯಿಂದ ಜಿ.ಪಂ. ಕಚೇರಿ ಎದುರು ಗುರುವಾರ ಪ್ರತಿಭಟನಾ ಧರಣಿ ನಡೆಸಲಾಯಿತು.
ಸಂದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಸುಮಾರು 8 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪರಿಷತ ಕನಿಷ್ಠ ವೇತನದ ಅಧಿಸೂಚನೆಯನ್ನು ಸರ್ಕಾರ ಕಳೆದ ಮೇ 22ರಂದು ಜಾರಿಗೆ ತಂದಿದೆ. ಆದರೆ, ಸಂಪುಟ ಉಪಸಮಿತಿ ರಚನೆಯ ನೆಪದಲ್ಲಿ ವೇತನ ಜಾರಿಗೆ ತಡೆ ನೀಡಿರುವುದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಂಡಂತಾಗಿದೆ. ಮೇ 22ರಿಂದ ಅನ್ವಯವಾಗುವಂತೆ ಎಲ್ಲ ಇಲಾಖೆಗಳ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೆ ತರಬೇಕು. ಬಿಸಿಎಂ ಇಲಾಖೆಯಲ್ಲಿ ಬಾಕಿ ಇರುವ 2 ತಿಂಗಳ ವೇತನ ಬಿಡುಗಡೆ ಮಾಡಬೇಕು. ಇಎಸ್ಐ, ಪಿಎ್ ಕಡಿತದಲ್ಲಿನ ಅವ್ಯವಸ್ಥೆಗಳನ್ನು ತಡೆದು, 8 ಗಂಟೆಗಳ ಕೆಲಸ, ವಾರದ ರಜೆ, ವೇತನ ಚೀಟಿ ಸೇರಿ ಎಲ್ಲ ಶಾಸನಬದ್ಧ ಸೌಲಭ್ಯಗಳನ್ನು ಖಾತರಿಪಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿ.ಪಂ. ಸಿಇಒ ಭುವನೇಶ ಪಾಟೀಲ ಮಾತನಾಡಿ, ಹೊಸ ವೇತನ ಜಾರಿಗೆ ಸರ್ಕಾರದಿಂದ ನಿರ್ದೇಶನ ಪಡೆಯಲಾಗುವುದು. ಬಾಕಿ ವೇತನವನ್ನು ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶೈನಾಜ್ ಹೊಡೆದಮನಿ, ಗಂಗಮ್ಮ ನಾಗನಾಯಕ, ಕುಸುಮಾ ವೀರಕರ, ಗೀತಾ ಬೊಮ್ಮಣ್ಣವರ, ರತ್ನಾ ಧಾರವಾಡ, ಸುಮಾ ದೇವಲಾಪುರ, ಯಲ್ಲಪ್ಪ, ಸುಮಿತ್ರಾ, ಅಕ್ಬರ್, ಗೀತಾ ಬಿಕೋಜಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.