ಹುಬ್ಬಳ್ಳಿ: ಬೆಂಗಳೂರು, ಕಲಬುರಗಿಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ, ನೈಋತ್ಯ ಪದವೀಧರ ಎಂಎಲ್ಸಿ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ನ ನಾಲ್ಕೂ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ನೌಕರರು, ಶಿಕ್ಷಕರು ಹಾಗೂ ಪದವೀಧರರಿಗಾಗಿ ವಿಶೇಷ ಯೋಜನೆಗಳನ್ನು ಘೋಷಿಸಿದೆ. ಕೌಶಲ ತರಬೇತಿಗಾಗಿ ಮೂರು ವರ್ಷದಲ್ಲಿ 1500 ಕೋಟಿ ರೂ. ಖರ್ಚು ಮಾಡಿದೆ. ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ಸ್ಥಗಿತಗೊಳಿಸಿ, ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಸಿದ್ಧತೆ ನಡೆಸಿದೆ. ಶೀಘ್ರವೇ ಸಮಿತಿ ವರದಿ ಕೇಸರಲಿದೆ ಎಂದರು.
ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು. ಅವರು ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ನಡೆಸಿದ್ದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗಾಗಿಯೇ ಪ್ರಸ್ತುತ ಅವಧಿಗೆ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಬಗ್ಗೆ ಶಿಕ್ಷಕರು, ಪದವೀಧರರು ಒಲವು ತೋರಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಪ್ರಗತಿಪರ ಕಾರ್ಯ ಹಾಗೂ ಅಭ್ಯರ್ಥಿಯ ಸಾಧನೆ ಗುರುತಿಸಿ ಅವರನ್ನು ಗೆಲ್ಲಿಸುವಲ್ಲಿ ಮುಂದಾಗಬೇಕು ಎಂದು ವಿನಂತಿಸಿದರು.
ಪಶ್ಚಿಮ ಪದವೀಧರ ಕ್ಷೇತ್ರದ ನಾಲ್ಕೂ ಜಿಲ್ಲೆಯಲ್ಲಿ ಒಟ್ಟು 97,400 ಮತದಾರರಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ 35 ಸಾವಿರ, ಹಾವೇರಿಯಲ್ಲಿ 24 ಸಾವಿರ, ಉತ್ತರ ಕನ್ನಡದಲ್ಲಿ 16 ಸಾವಿರ ಮತ್ತು ಗದಗ ಜಿಲ್ಲೆಯಲ್ಲಿ 21 ಸಾವಿರ ಮತದಾರರು ಇದ್ದಾರೆ. ಈಗಾಗಲೇ ಎಲ್ಲ ಕಡೆ ಪಕ್ಷದ ಮುಖಂಡರು ಪ್ರಚಾರ ಮಡೆಸುತ್ತಿದ್ದಾರೆ ಎಂದರು.
ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಟಿ.ಆರ್. ಶಿರೋಳ, ಕೆಪಿಸಿಸಿ ಶಿಕ್ಷಕರ ಘಟಕದ ಜಿಲ್ಲಾಧ್ಯಕ್ಷ ವಿ.ಎಸ್. ಚೌಕಿಮಠ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಎಂ.ಎಂ. ಗಿರಣಿವಡ್ಡರ ಸುದ್ದಿಗೋಷ್ಠಿಯಲ್ಲಿದ್ದರು.