ದೀಪಾವಳಿ ಹಬ್ಬದ ನಿಮಿತ್ತ ಹುಬ್ಬಳ್ಳಿಯಲ್ಲಿ ಬುಧವಾರ ಹುಬ್ಬಳ್ಳಿ-ಧಾರವಾಡದ 510 ತ್ಯಾಜ್ಯ ಶ್ರಮಿಕರಿಗೆ ರೇಷನ್ ಕಿಟ್‌ಗಳನ್ನು ವಿತರಿಸಲಾಯಿತು. 
ಧಾರವಾಡ

ತ್ಯಾಜ್ಯ ಶ್ರಮಿಕರ ಮಕ್ಕಳಿಗೆ ಶಿಕ್ಷಣ ಸಿಗಲಿ

ಹುಬ್ಬಳ್ಳಿ: ದೀಪಾವಳಿ ಹಬ್ಬದ ನಿಮಿತ್ತ ಹಸಿರು ದಳ, ಫಿನೋಲೆಕ್ಸ್ ಪೈಪ್ಸ್ ಆ್ಯಂಡ್ ಫಿಟಿಂಗ್ಸ್ ಮತ್ತು ಮುಕುಲ್ ಮಾಧವ ಫೌಂಡೇಷನ್ ನೇತೃತ್ವದಲ್ಲಿ ಇಲ್ಲಿಯ ಅಶೋಕನಗರದ ಡಿ.ಎಸ್. ಕರ್ಕಿ ಕನ್ನಡ ಭವನದಲ್ಲಿ ಬುಧವಾರ ಹುಬ್ಬಳ್ಳಿ-ಧಾರವಾಡದ 510 ತ್ಯಾಜ್ಯ ಶ್ರಮಿಕರಿಗೆ ರೇಷನ್ ಕಿಟ್‌ಗಳನ್ನು ವಿತರಿಸಲಾಯಿತು.

ಮಕ್ಕಳ ರಕ್ಷಣಾ ಘಟಕದ ಜಿಲ್ಲಾಧಿಕಾರಿ ದೀಪಾ ಜಾವೂರ ಮಾತನಾಡಿ, ತ್ಯಾಜ್ಯ ಶ್ರಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳ ರಕ್ಷಣಾ ಘಟಕದ ವತಿಯಿಂದ ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡುವುದರ ಜತೆಗೆ ಮಕ್ಕಳ ಶಿಕ್ಷಣಕ್ಕೆ ಅಗತ್ಯ ಪ್ರೋತ್ಸಾಹ ನೀಡಲಾಗುವುದು. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿದ್ದು, ಪೋಷಕರು ಈ ಅವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೋಟರಿ ಕ್ಲಬ್ ಆಫ್ ಸೆಂಟ್ರಲ್ ಅಧ್ಯಕ್ಷೆ ಡಾ. ನಾಗರೇಖಾ ಹೆಬಸೂರ ಉದ್ಘಾಟಿಸಿ ಮಾತನಾಡಿ, ಎಲ್ಲ ದಾನಗಳಿಗಿಂತ ಅನ್ನದಾನ ಶ್ರೇಷ್ಠ. ತ್ಯಾಜ್ಯ ಶ್ರಮಿಕರಿಗೆ ರೇಷನ್ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ. ನಮ್ಮ ಕ್ಲಬ್ ವತಿಯಿಂದ ತ್ಯಾಜ್ಯ ಶ್ರಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಮಾತನಾಡಿ, ತ್ಯಾಜ್ಯ ಶ್ರಮಿಕರು ತಮ್ಮ ಕೆಲಸದ ವೇಳೆ ಕಡ್ಡಾಯವಾಗಿ ಪಿಪಿಇ ಕಿಟ್‌ಗಳನ್ನು ಬಳಸಬೇಕು. ಕೆಲಸದಷ್ಟೇ ನಿಮ್ಮ ಆರೋಗ್ಯ ಮತ್ತು ಸುರಕ್ಷತೆಯೂ ಮುಖ್ಯ. ಈಗಾಗಲೇ ಹಲವರಿಗೆ ಅಂಬೇಡ್ಕರ್ ಸಹಾಯ ಹಸ್ತ ಕಾರ್ಡ್ ವಿತರಿಸಲಾಗಿದ್ದು, ಅದರ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳಬೇಕು. ಇನ್ನೂ ಅರ್ಜಿ ಸಲ್ಲಿಸದವರು ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದರು.

ಫಿನೋಲೆಕ್ಸ್ ಪೈಪ್ಸ್ ಆ್ಯಂಡ್ ಫಿಟಿಂಗ್ಸ್ ರಾಜ್ಯ ಘಟಕದ ಮುಖ್ಯಸ್ಥ ಪ್ರವೀಣ ಉರಾಳ ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ‘ನಮಸ್ತೆ’ ಯೋಜನೆಯಡಿ ತ್ಯಾಜ್ಯ ಶ್ರಮಿಕರಿಗೆ ವೈಯಕ್ತಿಕ ಸುರಕ್ಷತಾ ಸಾಧನ ವಿತರಿಸಿ ಜಾಗೃತಿ ಮೂಡಿಸಲಾಯಿತು.

ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ, ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಫಝಲ್ ಬಗಲಿ, ಸುರೇಶ ರಾಥೋಡ, ಫಿನೋಲೆಕ್ಸ್ ಪೈಪ್ಸ್ ಆ್ಯಂಡ್ ಫಿಟಿಂಗ್ಸ್ ಉತ್ತರ ಕರ್ನಾಟಕ ವಿಭಾಗದ ಮುಖ್ಯಸ್ಥ ಪ್ರಕಾಶ ಬಿಳಗಿ, ಹಾವೇರಿ ಮತ್ತು ಧಾರವಾಡ ವಿಭಾಗದ ಮುಖ್ಯಸ್ಥ ನವೀನ ಜಾಲಿಹಾಳ, ಬೆಳಗಾವಿ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಜಿ.ಎಸ್., ಠಾಣಾಧಿಕಾರಿ ಡಿ.ಕೆ. ದೊಡಮನಿ, ಹಸಿರು ದಳದ ಸಿಬ್ಬಂದಿ ನಿಂಗನಗೌಡ ಸತ್ತಿಗೌಡ್ರ, ರಮೇಶ ಬೇವೂರ, ಶಿಲ್ಪಾ, ಸಕ್ಕುಬಾಯಿ, ಜ್ಯೋತಿ, ದೀಪ್ತಿ, ಶಿವಲೀಲಾ, ಶಾಹನಾವಾಜ್ ಇತರರಿದ್ದರು.

ಹಸಿರು ದಳದ ವ್ಯವಸ್ಥಾಪಕ ಮಂಜುನಾಥ ಬಾರಕೇರ ಸ್ವಾಗತಿಸಿ ನಿರೂಪಿಸಿದರು.