ಸಿಬಿಸಿಟಿ ಯಂತ್ರ 
ಧಾರವಾಡ

ತಲೆಯಿಂದ ಕುತ್ತಿಗೆವರೆಗೆ ಚಿತ್ರಸಹಿತ ತಪಾಸಣೆ ಸುಲಭ

ಹುಬ್ಬಳ್ಳಿ: ತಲೆಯಿಂದ ಕುತ್ತಿಗೆವರೆಗೆ ಚಿತ್ರಸಹಿತ ತಪಾಸಣೆ ನಡೆಸಲು ಬ್ರೆಜಿಲ್‌ನಿಂದ ಸಿಬಿಸಿಟಿ ಯಂತ್ರ ತರಿಸಿದ್ದು, ಅಮೆರಿಕದಿಂದ ಆರ್ಟಿಫಿಸಿಯಲ್ ಇಂಟೆಲಿಜೆನ್ಸಿ (ಎಐ) ಪ್ಲಗಿನ್ ಖರೀದಿಸಲಾಗಿದೆ. ಅ. 14ರಂದು ಬೆಳಗ್ಗೆ 10ಕ್ಕೆ ನಗರದ ತತ್ವದರ್ಶ ಆಸ್ಪತ್ರೆ ಎದುರಿನ ಜೈಶಿವ್ ಕಾಂಪ್ಲೆಕ್ಸ್ ನೆಲಮಹಡಿಯ ಫೇಸ್ 3ಡಿ ಎಐ ಕ್ಲಿನಿಕ್ ಉದ್ಘಾಟನೆಯಾಗಲಿದೆ ಎಂದು ನೋವೊಲೇಸ್ ಫೌಂಡೇಷನ್ ಸಂಸ್ಥಾಪಕ ಹಾಗೂ ಖ್ಯಾತ ದಂತ ವೈದ್ಯ ಡಾ. ಚಂದ್ರಶೇಖರ ಯಾವಗಲ್ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು. ವಿವಿಧ ಗಣ್ಯರು ಅಂದು ಉಪಸ್ಥಿತರಿರುವರು ಎಂದರು.

ಉತ್ತರ ಕರ್ನಾಟಕ ಭಾಗದಲ್ಲಿಯೇ ಪ್ರಥಮ ಬಾರಿಗೆ ಈ ಯಂತ್ರ ಅಳವಡಿಸಲಾಗುತ್ತಿದೆ. ಬ್ರೆಜಿಲ್‌ನಿಂದ ಹಾರ್ಡ್‌ವೇರ್ ತರಿಸಿದರೆ, ಅಮೆರಿಕದಿಂದ ಸಾಫ್ಟ್‌ವೇರ್ ಖರೀದಿಸಲಾಗಿದೆ. ಎಐ ಆಧರಿತ ತಪಾಸಣೆ ನಡೆಸಲಾಗುತ್ತಿದೆ. 30 ಸೆಕೆಂಡ್‌ನಲ್ಲಿ ವರದಿ ಕೈಗೆ ಸಿಗಲಿದೆ, ರೇಡಿಯಾಲಾಜಿಸ್ಟ್ ಅಧ್ಯಯನ ಮಾಡಿ ಅರ್ಧ ಗಂಟೆಯಲ್ಲಿ ವರದಿ ಕೊಡುವರು. ನಂತರ ನಾವು ಚಿಕಿತ್ಸೆ ನೀಡಲು ಬಹಳಷ್ಟು ಅನುಕೂಲವಾಗಲಿದೆ ಎಂದರು.

ತಲೆಯಿಂದ ಕುತ್ತಿಗೆವರೆಗೆ ಅಂದರೆ ದವಡೆ, ಹಲ್ಲು, ಗದ್ದ ಇವೆಲ್ಲವೂ ಸೇರಿವೆ. ಇವುಗಳಲ್ಲಿ ಯಾವುದೇ ಭಾಗದಲ್ಲಿ ಸಮಸ್ಯೆ ಇದ್ದರೂ ತ್ವರಿತವಾಗಿ ಗಮನಹರಿಸಿ ಚಿಕಿತ್ಸೆ ನೀಡಬಹುದು. ಅಪಘಾತ ಸಂಭವಿಸಿದ ನಂತರ ದವಡೆ, ಹಲ್ಲು ಭಾಗದಲ್ಲಿ ತೀವ್ರ ಸ್ವರೂಪದ ಸಮಸ್ಯೆ ಎದುರಾಗಿದ್ದರೆ ತ್ವರಿತವಾಗಿ ಫೇಸ್ 3ಡಿ ಎಐನಲ್ಲಿ ವರದಿ ಸಿಗಲಿದೆ. ಇದರಿಂದ ಚಿಕಿತ್ಸೆ ನೀಡುವುದು ಸುಲಭವಾಗಲಿದೆ ಎಂದರು.

ನಮ್ಮಲ್ಲಿ ಮೊದಲಿನಿಂದಲೂ ಮೌತ್ ಸ್ಕ್ರೀನಿಂಗ್ ತಪಾಸಣೆ ಮಾಡಲಾಗುತ್ತಿದೆ. ಬಾಯಿ ಮತ್ತು ಹಲ್ಲುಗಳ ತಪಾಸಣೆ ನಡೆಸಿ, ಮುಂದಿನ ಎರಡು ವರ್ಷಗಳಲ್ಲಿ ಬರಬಹುದಾದ ರೋಗದ ಬಗ್ಗೆ ವರದಿ ಕೊಡಲಾಗುತ್ತಿದೆ. ಇದಕ್ಕೆ ಚಿಕಿತ್ಸೆಯೂ ನಮ್ಮಲ್ಲಿ ಲಭ್ಯವಿದೆ. ನೋವು ರಹಿತ ಚಿಕಿತ್ಸೆ ನೀಡಲು ನಮ್ಮ ತಂಡ ಸಿದ್ಧವಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ಯಂತ್ರಗಳು ಬರುತ್ತಿವೆ. ಅದಕ್ಕೆ ತಕ್ಕಂತೆ ನಮ್ಮಲ್ಲಿ ಸಾಧನಗಳನ್ನು ಅಳವಡಿಸಿ, ರೋಗಿಗಳಿಗೆ ಚಿಕಿತ್ಸೆ ನೀಡಲು ಉದ್ದೇಶಿಸಲಾಗಿದೆ ಎಂದರು.

ಡಾ. ರಾಕೇಶ ಯಾವಗಲ್, ಡಾ. ಲಕ್ಷ್ಮೀ ಯಾವಗಲ್ ಸುದ್ದಿಗೋಷ್ಠಿಯಲ್ಲಿದ್ದರು.