ಹುಬ್ಬಳ್ಳಿ: ಗೆದ್ದಾಗ ಚುನಾವಣಾ ಆಯೋಗ ಸರಿಯಾಗಿತ್ತು. ಸೋತ ಬಳಿಕ ಮಾತ್ರ ತಪ್ಪಾಗಿದೆ ಎನ್ನುವುದು ಯಾವ ತರ್ಕ? ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕುಟುಕಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಫಲಿತಾಂಶವನ್ನು ಒಪ್ಪಿಕೊಂಡು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಇವಿಎಂ ವಿಚಾರದಲ್ಲೂ ಇದೇ ದ್ವಂದ್ವ ನೀತಿ ಅನುಸರಿಸಲಾಗುತ್ತಿದೆ. ಇವಿಎಂ ಬಳಕೆಗೆ ಚಾಲನೆ ನೀಡಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಇವಿಎಂ ಮೂಲಕ ಗೆದ್ದಿವೆ. ಗೆದ್ದಾಗ ಪ್ರಶ್ನಿಸದೆ, ಸೋತಾಗ ಮಾತ್ರ ವಿಶ್ವಾಸಾರ್ಹತೆ ಪ್ರಶ್ನಿಸುವುದು ಸರಿಯಲ್ಲ ಎಂದು ತಿವಿದರು.
ಕೇಂದ್ರ ಕೃಷಿ ಸಚಿವರ ಭೇಟಿ ಸಾಧ್ಯತೆ: ಕರ್ನಾಟಕದ ಬರ ಪರಿಸ್ಥಿತಿಗೆ ನಿಯಮಾನುಸಾರ ಕೇಂದ್ರ ಸರ್ಕಾರದಿಂದ ಸಾಧ್ಯವಿರುವಷ್ಟು ನೆರವು ನೀಡಲಾಗುವುದು. ಇದರಲ್ಲಿ ರಾಜಕೀಯ ಮಾಡದೆ, ವಾಸ್ತವಾಂಶದ ಆಧಾರದಲ್ಲಿ ಕ್ರಮ ಜರುಗಿಸಬೇಕು. ಕೇಂದ್ರಕ್ಕೆ ಸೆ. 23ರಂದು ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಮನವಿ ಮಾಡಿತ್ತು. 10 ದಿನಗಳಲ್ಲೇ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ, ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿದ್ದರು. ತಂಡವು ಮುಖ್ಯಮಂತ್ರಿ ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದೆ. ಚವ್ಹಾಣ ಅವರೂ ರಾಜ್ಯಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದರು.
ಕೇಂದ್ರ ತಂಡದ ವರದಿ ಆಧರಿಸಿ ನೆರವು ನೀಡಲಾಗುವುದು. ಕಳೆದ 12 ವರ್ಷಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಸಾಕಷ್ಟು ಬೆಂಬಲ ನೀಡಿದೆ. ಈ ಬಾರಿಯೂ ರಾಜ್ಯದ ಸಂಕಷ್ಟಕ್ಕೆ ಸ್ಪಂದಿಸಲಿದೆ. ಪಕ್ಷಭೇದವಿಲ್ಲದೆ ನೆರವು ನೀಡುವುದು ಕೇಂದ್ರದ ನೀತಿ ಎಂದರು.
ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವಧಿಯಲ್ಲಿ ನೈಸರ್ಗಿಕ ವಿಕೋಪದ ವೇಳೆ ಸಣ್ಣ ರೈತರಿಗೆ ಎಕರೆಗೆ 8 ಸಾವಿರದ ರೂ. ವರೆಗೆ ಪರಿಹಾರ ನೀಡಲಾಗುತ್ತಿತ್ತು. ಈಗ ಕುಟುಂಬಕ್ಕೆ 2,500 ರೂ. ಪರಿಹಾರ ಘೋಷಿಸಲಾಗಿದೆ. ಅದರೂ ಸಮರ್ಪಕವಾಗಿ ವಿತರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರ್ಥಿಕ ನಿರ್ವಹಣೆ ವೈಫಲ್ಯದಿಂದಾಗಿ ರಾಜ್ಯ ಸರ್ಕಾರಕ್ಕೆ ಹಣಕಾಸಿನ ಸಂಕಷ್ಟ ಉಂಟಾಗಿದೆ. ಗುತ್ತಿಗೆದಾರರಿಗೆ ಹಣ ಪಾವತಿಸಲೂ ಸಾಧ್ಯವಾಗುತ್ತಿಲ್ಲ. ಈ ವೈಫಲ್ಯಕ್ಕೆ ಕೇಂದ್ರದ ಮೇಲೆ ಹೊಣೆ ಹೊರಿಸುವುದು ಸರಿಯಲ್ಲ ಎಂದರು.