ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಬಣಜಿಗರ ವಧು-ವರರ ಸಮಾವೇಶವನ್ನು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಉದ್ಘಾಟಿಸಿದರು. 
ಧಾರವಾಡ

ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಒತ್ತಡ ಹೇರುವೆ

ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭರವಸೆ

ಹುಬ್ಬಳ್ಳಿ: ವೀರಶೈವ-ಲಿಂಗಾಯತ ಮತ್ತು ಒಳಪಂಗಡಗಳದವರು ಒಗ್ಗಟ್ಟಾಗಬೇಕು. ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸೇರ್ಪಡೆಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಒತ್ತಡ ಹೇರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಹುಬ್ಬಳ್ಳಿ ತಾಲೂಕು, ಧಾರವಾಡ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ನಗರದ ಅಮರಗೋಳ ಎಪಿಎಂಸಿ ಆವರಣದ ವಸ್ತು ಸಂಗ್ರಹಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಬಣಜಿಗರ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮವರು ಒಗ್ಗಟ್ಟು ಆಗದೇ ಇದ್ದರೆ ರವಿ ಹಂಜ್ ಅಂಥವರು ಸಂಶೋಧನೆ ಹೆಸರಲ್ಲಿ ಸವಾರಿ ಮಾಡುತ್ತಾರೆ. ಇಂಥವುಗಳನ್ನು ನಾವು ಎಂದಿಗೂ ಸಹಿಸಬಾರದು. ಜಗತ್ತಿಗೆ ಮೊದಲು ಅನುಭವ ಮಂಟಪ ಅಥವಾ ಪಾರ್ಲಿಮೆಂಟ್ ನೀಡಿದವರು ಬಸವಣ್ಣನವರು. ಎಲ್ಲ ವರ್ಗದವರನ್ನೂ ಸಮನಾಗಿ ಕಂಡವರು. ಮಹಿಳೆಯರಿಗೂ ಅವಕಾಶ ಕಲ್ಪಿಸಿದ್ದರು. ಇದೇ ದಾರಿಯಲ್ಲಿ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಜಾರಿಗೆ ತರುತ್ತಿದೆ ಎಂದರು.

ಗುರು-ವಿರಕ್ತರು ಒಂದಾಗಬೇಕು. ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಬೇಕು. ಸ್ವಾಮಿಗಳಲ್ಲಿ ಗೊಂದಲವಿದೆಯೇ ಹೊರತು, ನಮ್ಮ ಸಮಾಜದಲ್ಲಿ ಅಲ್ಲ. ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗಿ ಒಗ್ಗಟ್ಟು ಪ್ರದರ್ಶಿಸಿದರೆ, ನಮ್ಮ ಸಮಾಜಕ್ಕೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬಣಜಿಗ ಸಮಾಜ ಒಂದಾಗಲು ಇಂಥ ವೇದಿಕೆಗಳನ್ನು ಕಲ್ಪಿಸುತ್ತಿರಬೇಕು. ವಧು-ವರರು ಸಿಗುವುದು ಈಗ ಕಷ್ಟವಾಗುತ್ತಿದೆ. ಇಂಥ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರಲ್ಲದೆ, ವರದಕ್ಷಿಣೆ ಪಿಡುಗು ಹೋಗಲಾಡಿಸುವ ಪ್ರಯತ್ನ ನಮ್ಮ ಸಮಾಜದಿಂದ ಶುರುವಾಗಬೇಕು ಎಂದರು.

ಮದುವೆಯಾಗಿ ಮನೆಗೆ ಸೊಸೆ ಬಂದಾಗ ಮಗಳಂತೆ ಕಾಣಬೇಕು. ಸೊಸೆ ಅತ್ತೆಯನ್ನು ತಾಯಿಯಂತೆ ನೋಡಿಕೊಳ್ಳಬೇಕು. ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಸುಗಮ ಮತ್ತು ಚೆಂದದ ಸಂಸಾರಕ್ಕೆ ಸಂಸ್ಕಾರ ಅತಿಮುಖ್ಯ ಎಂದರು.

ಅಣ್ಣಿಗೇರಿ-ಭಂಡಿವಾಡ ಗಿರೀಶ ಆಶ್ರಮದ ಡಾ.ಎ.ಸಿ. ವಾಲಿ ಮಹಾರಾಜರು ಸಾನ್ನಿಧ್ಯ ವಹಿಸಿ ಮಾತನಾಡಿ, ಇಂಥ ಕಾರ್ಯಕ್ರಮದ ಮೂಲಕ ಇತಿಹಾಸ ನಿರ್ಮಾಣವಾಗಿದೆ. ಸಂಘಟನೆ ಮಾಡುವ ಮೂಲಕ ಯಶಸ್ಸು ಸಾಧಿಸಲಾಗಿದೆ. ಸಮಾಜ ತಾಯಿ ಇದ್ದಂತೆ, ಸಮಾಜದ ಋಣ ತೀರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಧಾರವಾಡ ಜಿಲ್ಲಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಾನಂದ ಕವಳಿ ಮಾತನಾಡಿ, ಪ್ರಥಮ ಬಾರಿಗೆ ಇಂಥ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನು ಪ್ರತಿವರ್ಷ ಮುಂದುವರಿಸುವ ಯೋಜನೆ ರೂಪಿಸಲಾಗುವುದು. ಒಡಕು ಬಂದರೆ ಕೂಡಿಕೊಂಡು ಹೋಗುವ, ವ್ಯತ್ಯಾಸವಿಲ್ಲದ ರೀತಿಯಲ್ಲಿ ಬದುಕುವ ಪಾಠ ಶುರುವಿಟ್ಟುಕೊಳ್ಳೋಣ ಎಂದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಲೆಕ್ಕಪರಿಶೋಧಕ ಚನ್ನವೀರ ಮುಂಗುರವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಬಂಧಗಳನ್ನು ಬೆಸೆಯುವ ಸಾರ್ಥಕ ಪ್ರಯತ್ನವಿದು. ಭವಿಷ್ಯದ ಪೀಳಿಗೆ ಒಗ್ಗೂಡಿಸುವ ಕೆಲಸ ನಿರಂತರ ನಡೆಯಲಿದೆ ಎಂದರು.

ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಗುರುಪಾದಪ್ಪ ಶಿರೂರ ಅಧ್ಯಕ್ಷತೆ ವಹಿಸಿದ್ದರು.

ಎಂಎಲ್‌ಸಿ ಪ್ರದೀಪ ಶೆಟ್ಟರ್, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಪ್ರಮುಖರಾದ ಶಂಕರಣ್ಣ ಮುನವಳ್ಳಿ, ತಾರಾದೇವಿ ವಾಲಿ, ವೀರಣ್ಣ ಮಳಗಿ, ಸಂತೋಷ ಪಟ್ಟಣಶೆಟ್ಟಿ, ಪ್ರಕಾಶ ಅಂಗಡಿ, ಗಜಾನನ ನೀಲಾಕರಿ, ಚನ್ನಬಸಪ್ಪ ಧಾರವಾಡಶೆಟ್ಟರ್, ಮಲ್ಲಿಕಾರ್ಜುನ ಶಿರಗುಪ್ಪಿ, ಬಸವರಾಜ ಶೀಲವಂತರ, ಮಹೇಶ ಬುರ್ಲಿ, ಚೆನ್ನು ಹೊಸಮನಿ, ಪ್ರಕಾಶ ಶೃಂಗೇರಿ, ಸಿದ್ದಣ್ಣ ಕೆಸರಪ್ಪನವರ, ಇತರರಿದ್ದರು.