ಹಾವೇರಿಯಲ್ಲಿ ಆಶಾ ಪಾಟೀಲ ಬದಲಿಗೆ ಶಿಲ್ಪಾ ಬುಡೆನ್ನವರ ಮತದಾನ ಮಾಡಿದ್ದರ ಫೋಟೋಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಹುಬ್ಬಳ್ಳಿಯಲ್ಲಿ ಶನಿವಾರ ಪ್ರದರ್ಶಿಸಿದರು. 
ಧಾರವಾಡ

ಕಾಂಗ್ರೆಸ್‌ಗೆ ವೋಟ್‌ಚೋರಿ ರಕ್ತಗತ

ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿ ಬದಲಿಗೆ ಬೇರೊಬ್ಬರಿಂದ ಮತ

ಹುಬ್ಬಳ್ಳಿ: ಎಂಎಲ್‌ಸಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ಹಾವೇರಿಯಲ್ಲಿ ನಡೆದ ಮತದಾನದ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ಪತ್ನಿ ಬದಲಿಗೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಶಿಲ್ಪಾ ಬುಡೆನ್ನವರ ಮತದಾನ ಮಾಡಿದ್ದಾರೆ. ವೋಟ್ ಚೋರಿ ಎಂಬುದು ಕಾಂಗ್ರೆಸ್‌ನವರಿಗೆ ರಕ್ತಗತವಾಗಿ ಬಂದಿರುವುದಕ್ಕೆ ಇದು ಉದಾಹರಣೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಹಿತ ಎಲ್ಲರೂ ಚುನಾವಣಾ ಆಯೋಗದ ವಿರುದ್ಧ ಮಾತನಾಡುತ್ತಿದ್ದಾರೆ. ತಮ್ಮದೇ ಪಕ್ಷದ ಜಿಲ್ಲಾಧ್ಯಕ್ಷ ತಮ್ಮ ಪತ್ನಿ ಬದಲಿಗೆ ಬೇರೆಯವರನ್ನು ವೋಟ್ ಹಾಕಿಸಿ, ಫೋಟೋಗೆ ಫೋಸು ನೀಡುತ್ತಿದ್ದಾರೆ. ಇದು ಯಾವ ವೋಟ್ ಚೋರಿ? ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಎಂಎಲ್‌ಸಿ ಚುನಾವಣೆ ವೇಳೆ ಸಂಜೀವಕುಮಾರ ಪತ್ನಿ ಆಶಾ ಪಾಟೀಲ ಮತದಾನ ಮಾಡಬೇಕಿತ್ತು. ಅವರು ಊರಲ್ಲಿ ಇರಲಿಲ್ಲ. ಆಗ ಆಶಾ ಬದಲಿಗೆ ಶಿಲ್ಪಾ ಬುಡೆನ್ನವರ ಮತದಾನ ಮಾಡಿದ್ದಾರೆ. ಸಚಿವ ರುದ್ರಪ್ಪ ಲಮಾಣಿ ಅವರ ಹಿಂದೆ ತೆರಳಲು ಶಿಲ್ಪಾ, ವೋಟರ್ ಲಿಸ್ಟ್ ನೋಡಿ ಅಧಿಕಾರಿಗಳು ಆಶಾ ಪಾಟೀಲ ಎಂದು ಕೂಗುತ್ತಾರೆ. ಅದಕ್ಕೆ ಹೌದು ಎನ್ನುತ್ತಾರೆ ಶಿಲ್ಪಾ. ವಿಶೇಷವೆಂದರೆ, ಶಿಲ್ಪಾ ಹೆಸರು ಈ ಚುನಾವಣೆಯ ಮತದಾರರ ಪಟ್ಟಿಯಲ್ಲಿಲ್ಲ ಎಂದು ವಿವರಿಸಿದರು.

ಹಾವೇರಿಯ ಉಪವಿಭಾಗಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ (ಬೂತ್ ನಂ. 85) ರುದ್ರಪ್ಪ ಲಮಾಣಿ ಮತದಾನ ಮಾಡುವ ವೇಳೆ ಶಿಲ್ಪಾ ಅವರ ಬಳಿಯೇ ನಿಂತಿದ್ದಾರೆ. ಸಚಿವರ ಹಿಂದೆ ಹೋದರೆ, ಅಧಿಕಾರಿಗಳು ಕೇಳುವುದಿಲ್ಲ ಎಂಬ ಅಭಿಪ್ರಾಯ ಅವರಲ್ಲಿರಬಹುದು. ಮತದಾನದ ಬಳಿಕ ಎಲ್ಲರೂ ಫೋಟೋಗಳಿಗೆ ಫೋಸು ಕೊಟ್ಟಿದ್ದಾರೆ. ವಿಡಿಯೋದಲ್ಲಿಯೂ ರೆಕಾರ್ಡ್ ಆಗಿದೆ ಎಂದು ದೂರಿದರು.

ರಾಜ್ಯ ಸರ್ಕಾರದ ನಿರ್ದೇಶನದಂತೆ ಅಧಿಕಾರಿಗಳು ಕೇಳುತ್ತಿದ್ದಾರೆ. ಶಿಲ್ಪಾ, ಆಶಾ ಪಾಟೀಲ ಅಲ್ಲವೆಂದು ಗೊತ್ತಿದ್ದರೂ ವೋಟರ್ ಐಡಿ ನೋಡದೇ ಬ್ಯಾಲೆಟ್ ಪೇಪರ್ ಕೊಟ್ಟು ಕಳಿಸಿ ಮತದಾನ ಮಾಡಿಸಿದ್ದಾರೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಕೆಲವೆಡೆ ಮತದಾನ ಪ್ರಕ್ರಿಯೆ ನಡೆಯುವ ವೇಳೆ ಮತದಾರರಿಗೆ ಸೀರಿಯಲ್ ನಂಬರ್ ಪ್ರಕಾರ ಸಂಖ್ಯೆ ಬರೆಯಿರಿ ಎಂದು ಸಲಹೆ ನೀಡಿದ್ದಾರೆ. ಇವೆಲ್ಲವನ್ನೂ ಒಟ್ಟುಗೂಡಿಸಿ, ಪ್ರಾದೇಶಿಕ ಆಯುಕ್ತರಿಗೆ ಭಾನುವಾರ ಇಲ್ಲವೇ ಸೋಮವಾರ ದೂರು ಕೊಡುತ್ತೇವೆ. ಈ ಮತ ರದ್ದುಗೊಳಿಸಬೇಕು. ಬೇರೊಬ್ಬರ ಹೆಸರಲ್ಲಿ ಮತದಾನ ಮಾಡಿದ ಶಿಲ್ಪಾ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂಬ ಒಕ್ಕಣೆ ದೂರಿನಲ್ಲಿ ಇರಲಿದೆ ಎಂದರು.

ಫೋಟೋ ಹಾಗೂ ಪ್ರಾಜೆಕ್ಟರ್ ಮೂಲಕ ಮತದಾನ ಮಾಡಿದ್ದರ ಕುರಿತು ಟೆಂಗಿನಕಾಯಿ ವಿವರಿಸಿದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಎಂಎಲ್‌ಸಿ ಶಿವರಾಜ ಸಜ್ಜನರ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಿರಣ ಕೊಳ್ಳಿ, ಚುನಾವಣಾ ಏಜೆಂಟ್ ಡಾ.ಎಂ.ಆರ್. ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.