ಅನ್ವರ್‌ಖಾನ್ ಪಠಾಣ 
ಧಾರವಾಡ

ಆಸ್ತಿ ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಂದ ಪುತ್ರ

ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ವಿವಾದವಾಗಿ ಸ್ವಂತ ಚಿಕ್ಕಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಲ್ಲಿಯ ಹಳೇ ಹುಬ್ಬಳ್ಳಿಯ ಬಾಣತಿಕಟ್ಟಿಯ ಮೆಹಬೂಬ್ ನಗರದಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಅನ್ವರ್‌ಖಾನ್ ಅಲ್ಲಾವುದ್ದೀನ್ ಪಠಾಣ (46) ಕೊಲೆಯಾದ ದುರ್ದೈವಿ. ಮನೆಯ (ಕೆಳ ಮತ್ತು ಮೇಲ್ಮಹಡಿ) ಹಂಚಿಕೆ ವಿಷಯವಾಗಿ ಮಧ್ಯೆ ಜಗಳವಿತ್ತು. ಅನ್ವರ್‌ಖಾನ್ ಸಹೋದರ ಅಜಗರ್‌ನ ಪುತ್ರ ಸಿರಾಜ್ ಚಾಕುವಿನಿಂದ ಇರಿದಿದ್ದಾನೆ.

ಮೊದಲು ಮನೆ ಎದುರು ಆಸ್ತಿ ಹಂಚಿಕೆ ವಿಷಯವಾಗಿ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದು, ಅನ್ವರ್‌ಖಾನ್‌ಗೆ ಸಿರಾಜ್ ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಬಲವಾಗಿ ಇರಿದಿದ್ದಾನೆ. ಕೂಡಲೇ ಕೆಎಂಸಿಆರ್‌ಐಗೆ ಚಿಕಿತ್ಸೆಗೆಂದು ತರಲಾಗಿತ್ತಾದರೂ ಅನ್ವರ್‌ಖಾನ್ ಮೃತಪಟ್ಟಿದ್ದರು.

ಕೆಎಂಸಿಆರ್‌ಐಗೆ ಭೇಟಿ ನೀಡಿದ ಹು-ಧಾ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಹಾಗೂ ವೈದ್ಯರಿಂದ ಮಾಹಿತಿ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭೂಷಣ ಬೋರಸೆ, ಮನೆಯ ಹಂಚಿಕೆ ವಿಷಯವಾಗಿ ಆಗಾಗ ಸಹೋದರರ ಮಧ್ಯೆ ಜಗಳವಾಗುತ್ತಿತ್ತು. ಅನ್ವರ್‌ಖಾನ್‌ನನ್ನು ಸಹೋದರನ ಮಗ ಚಾಕುವಿನಿಂದ ಇರಿದಿದ್ದಾನೆ. ನಮ್ಮ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದು, ಸಿರಾಜ್‌ನನ್ನು ಶೀಘ್ರವೇ ಬಂಧಿಸಲಾಗುವುದು. ಅನ್ವರ್‌ಖಾನ್ ಹೊಟ್ಟೆಯೊಳಗೆ ಬಲವಾಗಿ ಚಾಕು ಇರಿತವಾಗಿದ್ದು, ಪೋಸ್ಟ್ ಮಾರ್ಟಂ ವರದಿಗಾಗಿ ಕಾಯುತ್ತೇವೆ ಎಂದು ತಿಳಿಸಿದರು.