ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ಗುರುವಾರ ಏರ್ಪಡಿಸಿದ್ದ ನಶಾಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಉಪ ಆಯುಕ್ತ ರಮೇಶಕುಮಾರ ಎಚ್. ಮಾತನಾಡಿದರು. 
ಧಾರವಾಡ

ಅಮಲು ಪದಾರ್ಥ ಸೇವಿಸಿದರೆ ಜೀವನ ನರಕ

ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ

ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಚಾಲುಕ್ಯ ಸಭಾಂಗಣದಲ್ಲಿ ನಶಾಮುಕ್ತ ಅಭಿಯಾನ ನಿಮಿತ್ತ ಗುರುವಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಅಬಕಾರಿ ಇಲಾಖೆ ಉಪ ಆಯುಕ್ತ ರಮೇಶಕುಮಾರ ಎಚ್. ಮಾತನಾಡಿ, ವಿದ್ಯಾರ್ಥಿಗಳ ಜೀವನವೇ ಸುಂದರ. ಅಮಲು ಪದಾರ್ಥದ ದಾಸರಾದರೆ, ಬದುಕು ನರಕ. ಈ ನಿಟ್ಟಿನಲ್ಲಿ ಸಂಘ ಜೀವಿಗಳಾದ ನಾವು, ಯಾರ ಜತೆಗೆ ಇರಬೇಕು? ಇರಬಾರದು ಎಂಬುದನ್ನು ಮೊದಲು ತಿಳಿಯಬೇಕು. ತದನಂತರ ವಿದ್ಯಾರ್ಥಿ ಜೀವನ ಮತ್ತಷ್ಟು ಸುಂದರವಾಗಲಿದೆ ಎಂದರು.

ಅಮಲು ಪದಾರ್ಥಗಳ ಸೇವನೆಯಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲಿದೆ. ಕುಟುಂಬದ ನೆಮ್ಮದಿ ಕುಸಿಯಲಿದೆ. ಸಂಬಂಧಿಸಿದ ಇಲಾಖೆಯವರ ಕೈಗೆ ಸಿಕ್ಕಿ ಹಾಕಿಕೊಂಡರೆ, ಕಾನೂನು ಕ್ರಮ ಕಠಿಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ವೈದ್ಯಕೀಯ ಕಾಲೇಜ್‌ನ ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ಕೃಷ್ಟದಲ್ಲಿಟ್ಟುಕೊಳ್ಳುತ್ತಾರೆ. ಜತೆಗೆ ರೋಗಿಗಳ ಆರೋಗ್ಯವನ್ನೂ ಸುಧಾರಿಸುವಂಥ ಸೇವೆ ಮಾಡುತ್ತಾರೆ ಎಂದು ಗುಣಗಾನ ಮಾಡಿದರು.

ನ್ಯಾಯವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸುನಿಲಕುಮಾರ ಬಿರಾದಾರ ಮಾತನಾಡಿ, ನಾವು ಅಮಲು ಪದಾರ್ಥ ಸೇವನೆ ಮಾಡಿಲ್ಲ ಎಂದು ಹೇಳಿಕೊಳ್ಳಬಹುದು. ಆದರೆ, ದೇಹದ ರಕ್ತದಲ್ಲಿರುವ ಅಮಲು ಪದಾರ್ಥವು ತಪಾಸಣೆ ವೇಳೆ ನಾನಿದ್ದೇನೆ ಎಂದು ಸತ್ಯ ಹೇಳುತ್ತದೆ. ಆಗ ನಾವು ಏನೂ ಮಾಡಲು ಬರುವುದಿಲ್ಲ. ಪೊಲೀಸ್ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎಂದು ತಿಳಿವಳಿಕೆ ನೀಡಿದರು.

ಡಾ. ಸ್ಮಿತಾ ಬಿರಾದಾರ, ನೂತನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಾಧ್ಯಾಪಕ ಡಾ. ಸುನಿಲ ಯಾದವ್, ಡಾ. ಸುಶ್ಮಾ ಸೇಂದ್ರೆ, ಅಬಕಾರಿ ಇಲಾಖೆ ಅಧಿಕಾರಿಗಳಾದ ಅಮೃತ ಗುಡಿ, ಶ್ರೀಕಾಂತ ಭಂಡಾಗರ ಇತರರಿದ್ದರು.