youth commission ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತೀರ್ಥಹಳ್ಳಿ ಮಾತನಾಡಿದರು.
- ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಒತ್ತಾಯ
- ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಯೋಗ ಅಗತ್ಯ
ಹುಬ್ಬಳ್ಳಿ: youth commission ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕೂಡಲೇ ರಾಜ್ಯ ಯುವ ಆಯೋಗವನ್ನು ರಚನೆ ಮಾಡಬೇಕೆಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತೀರ್ಥಹಳ್ಳಿ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ಸಬಲೀಕರಣ, ಶೈಕ್ಷಣಿಕ, ಸಾಮಾಜಿಕ, ಮಾನಸಿಕ ಆರೋಗ್ಯ ಹಾಗೂ ಉದ್ಯೋಗ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಯೋಗ ಅತ್ಯಗತ್ಯವಾಗಿದೆ. ಹಾಗಾಗಿ ರಾಜ್ಯ ಸರ್ಕಾರ ತಕ್ಷಣ ಯುವ ಆಯೋಗ ಸ್ಥಾಪಿಸಬೇಕು ಎಂದರು.
ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಅನೇಕ ಆಶ್ವಾಸನೆಗಳನ್ನು ನೀಡಿದೆ. ಅದರಲ್ಲಿ ಯುವ ಆಯೋಗ ರಚನೆಯೂ ಒಂದಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೇ ವರ್ಷ ಕಳೆದರೂ ಆಯೋಗ ರಚಿಸಿಲ್ಲ. ಈ ಬಗ್ಗೆ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಹಿಂದಿನ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿ 20ಕ್ಕೂ ಹೆಚ್ಚು ಸಚಿವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಆದರೂ ಸಿಎಂ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ಜನಪ್ರತಿನಿಧಿಗಳು ವೇದಿಕೆ ಸಿಕ್ಕಾಗ ಯುವ ಜನತೆ ಬಗ್ಗೆ ದೊಡ್ಡ ಭಾಷಣ ಮಾಡುತ್ತಾರೆ. ಆದರೆ, ಕಾರ್ಯರೂಪಕ್ಕೆ ಬರುವುದಿಲ್ಲ. ಯೋಜನೆಗಳು ಭಾಷಣಕ್ಕೆ ಸೀಮಿತವಾಗುತ್ತಿದೆ. ಕೇರಳ, ಅಸ್ಸಾಂ, ಮಿಜೋರಾಂ ಹಾಗೂ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಯುವ ಆಯೋಗಗಳು ಕಾರ್ಯನಿರ್ವಹಿಸುತ್ತಿದ್ದು, ಯುವಕರ ಹಕ್ಕುಗಳ ರಕ್ಷಣೆ, ಕೌಶಲಾಭಿವೃದ್ಧಿ, ಉದ್ಯೋಗ, ಮಾದಕ ವ್ಯಸನ ನಿಯಂತ್ರಣ ಹಾಗೂ ಮಾನಸಿಕ ಆರೋಗ್ಯ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದರು.
ಈ ಬಗ್ಗೆ ಮಾಹಿತಿ ಸರ್ಕಾರಕ್ಕೆ ನೀಡುತ್ತೇವೆ. ಆಗಲಾದರೂ ಸರ್ಕಾರ ರಾಜ್ಯದಲ್ಲಿ ಯುವ ಆಯೋಗ ರಚಿಸಲು ಮುಂದಾಗಬೇಕು. ಸರ್ಕಾರ ಜಾರಿಗೆ ತಂದಿರುವ ಯುವನಿಧಿ, ಭಾರತ್ ಜೋಡೋ ಸಂಘಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲವಾಗಲಿದೆ. ಮುಂದಿನ ವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಇಸ್ಮಾಯಿಲ್ ತಿಳಿಸಿದರು.
ಅಸದುಲ್ಲಾ ಖಾನ್ ಝಕಿ, ಇರ್ಷಾದ್ ವೇಣೂರು, ಅಬ್ದುಸ್ಸಲಾಮ್ ಹಾಗೂ ಅಬೂಝರ್ ಗೋಷ್ಠಿಯಲ್ಲಿದ್ದರು.