ಹುಬ್ಬಳ್ಳಿಯಲ್ಲಿ ಆಯೋಜಿಸಿರುವ young indians ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್-2026 ಕಾರ್ಯಕ್ರಮವನ್ನು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದರು.
ಹುಬ್ಬಳ್ಳಿ: ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ young indians ಜಾರಿಯಲ್ಲಿದೆ. ನಮ್ಮ ಭಾರತದ್ದು ಇವೆಲ್ಲವುಗಳಿಗಿಂತ ಸೌಂದರ್ಯದಿಂದ ಕೂಡಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಬಣ್ಣಿಸಿದರು.
ಯಂಗ್ ಇಂಡಿಯನ್ಸ್ ವತಿಯಿಂದ ಇಲ್ಲಿಯ ದೇಶಪಾಂಡೆ ನಗರದ ಗುಜರಾತ ಭವನದಲ್ಲಿ ಆಯೋಜಿಸಿರುವ ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್-2026 ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಎಲ್ಲ ಜನ, ಧರ್ಮದವರನ್ನೊಳಗೊಂಡಿದೆ. ಸಮಾನತೆ, ನ್ಯಾಯ, ಅವಕಾಶವಾದ, ಸಾಮಾಜಿಕ ನ್ಯಾಯ, ರಾಷ್ಟ್ರಪ್ರೇಮ ಸೇರಿದಂತೆ ವಿವಿಧ ವಿಷಯಗಳನ್ನು ಮೇಳೈಸಿಕೊಂಡಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ವೇಳೆ ಇವೆಲ್ಲಾ ಅಂಶಗಳನ್ನು ಸೇರಿಸಿದ್ದರು. ಅವರಲ್ಲಿ ಭವ್ಯ ಭಾರತದ ದೃಷ್ಟಿಕೋನವಿತ್ತು ಎಂದು ವರ್ಣಿಸಿದರು.
ಯುವ ಜನಾಂಗದ ಕೈಯಲ್ಲಿ ಭಾರತವಿದೆ. ಈ ಮೊದಲು ಅವಕಾಶಕ್ಕಾಗಿ ಕಾಯುತ್ತಿದ್ದರು. ಈಗ ಎಲ್ಲ ಅವಕಾಶಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿಕೊಟ್ಟಿದ್ದಾರೆ. ಅವುಗಳನ್ನು ಬಳಸಿಕೊಂಡು ಮುನ್ನಗ್ಗುವ ಛಾತಿ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಭಾರತವು ವಿಶ್ವದ ನಂ. 1 ರಾಷ್ಟ್ರವಾಗಲಿದೆ. ತಾವೆಲ್ಲರೂ ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂತರ ಬಸವರಾಜ ಬೊಮ್ಮಾಯಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವಿದ್ಯಾರ್ಥಿಗಳ ಮಧ್ಯೆ ಸಂವಾದ, ವಾದ-ವಿವಾದ, ಸರ್ಕಾರ ನಡೆಸುವ ರೀತಿ-ರಿವಾಜುಗಳು ನಡೆದವು. ಆಡಳಿತ ಮತ್ತು ಪ್ರತಿಪಕ್ಷದ ಆಶಯ, ಜನರ ಹಕ್ಕೊತ್ತಾಯದಂತೆ ಆಡಳಿತ ನಿರ್ವಹಣೆ ಕುರಿತು ಗಂಭೀರತೆಯಿಂದ ಕೂಡಿತ್ತು.
ಹುಬ್ಬಳ್ಳಿ ಯಂಗ್ ಇಂಡಿಯನ್ಸ್ ಚಾಪ್ಟರ್ ಮಾಜಿ ಅಧ್ಯಕ್ಷ ಮತ್ತು ಸಹ ಸಂಸ್ಥಾಪಕ ಡಾ. ಶ್ರೀನಿವಾಸ ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷ ಡಾ. ಸಮೀರ ಮಂಗಳವೇಢೆ, ಉಪಾಧ್ಯಕ್ಷೆ ಡಾ. ದೀಪ್ತಿ ಜೋಶಿ, ಪದಾಧಿಕಾರಿಗಳಾದ ಲೇಖಾ ಖೋನಾ, ದೀಪಕ್ ಗಿರಿಯಾಪುರ ಇತರರಿದ್ದರು. ಹು-ಧಾ ಅವಳಿ ನಗರದ ಸರ್ಕಾರಿ ಸೇರಿದಂತೆ ವಿವಿಧ ಖಾಸಗಿ ಶಾಲೆಗಳ 220 ವಿದ್ಯಾರ್ಥಿಗಳು ಭಾಗವಹಿಸಿದ್ದರು.