ಚೆನ್ನೈನಲ್ಲಿ ಏರ್ಪಡಿಸಿದ್ದ ಯಂಗ್​ ಇಂಡಿಯಾ ಪಾಕಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆರ್​ವಿಎಸ್​ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ವಿದ್ಯಾರ್ಥಿಗಳಾದ ಸುಪ್ರೀತಾ ಹೂಗಾರ, ನೈತಿಕ್​ ತೋಟಪ್ಪನವರ, ನವ್ಯಾ ಸಾಲುಂಕೆ ಮತ್ತು ಸಿಂಚನಾ ಇರಡ್ಡಿ. 
ಧಾರವಾಡ

ಯಂಗ್​ ಇಂಡಿಯಾ ಪಾಕಕಲೆ ಸ್ಪರ್ಧೆ

ಆರ್​ವಿಎಸ್​ ಸ್ಕೂಲ್​ ವಿದ್ಯಾರ್ಥಿಗಳ ಸಾಧನೆ

ಹುಬ್ಬಳ್ಳಿ: ನವಲಗುಂದ ತಾಲೂಕಿನ ಖನ್ನೂರಿನ ಆರ್​ವಿಎಸ್​ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಯಂಗ್​ ಇಂಡಿಯಾ ಪಾಕಕಲೆ 2026-27ರ ಪ್ರಾದೇಶಿಕ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.

ಇತ್ತೀಚೆಗೆ ಚೆನ್ನೈನ ಇನ್​ಸ್ಟಿಟ್ಯೂಟ್​ ಆಫ್​ ಹೋಟೆಲ್​ ಮ್ಯಾನೇಜ್​ಮೆಂಟ್​ (ಐಎಚ್​ಎಂ) ವತಿಯಿಂದ ಸಿಬಿಎಸ್​ಇ ಶಾಲೆಗಳ 6ರಿಂದ 9ನೇ ತರಗತಿಯವರಿಗಾಗಿ ಆಯೋಜಿಸಿದ್ದ ಮೂರು ಹಂತಗಳ ಸ್ಪರ್ಧೆಯಲ್ಲಿ ಶಾಲೆಯ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿ ಪ್ರತಿಭೆ ಅನಾವರಣ ಮಾಡಿದರು.

6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಂಕಿ ಬಳಸದೆ ಅಡುಗೆ ಮಾಡುವ ಸ್ಪರ್ಧೆ (ಫೈರ್ರ್​ಲೆಸ್​ ಕುಕ್ಕಿಂಗ್​) ಹಾಗೂ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೆಂಕಿ ಬಳಸಿ ಅಡುಗೆ ಮಾಡುವ ಸ್ಪರ್ಧೆ (ಕುಕ್ಕಿಂಗ್​ ವಿತ್​ ಫೈರ್ರ್​) ಏರ್ಪಡಿಸಲಾಗಿತ್ತು.

ಬೆಂಕಿ ಬಳಸದೆ ಅಡುಗೆ ಮಾಡುವ ವಿಭಾಗದಲ್ಲಿ 7ನೇ ತರಗತಿಯ ಸುಪ್ರೀತಾ ಹೂಗಾರ ಮತ್ತು ನೈತಿಕ್​ ತೋಟಪ್ಪನವರ, ಬೆಂಕಿ ಬಳಸಿ ಅಡುಗೆ ಮಾಡುವ ವಿಭಾಗದಲ್ಲಿ 9ನೇ ತರಗತಿಯ ನವ್ಯಾ ಸಾಲುಂಕೆ ಮತ್ತು ಸಿಂಚನಾ ಇರಡ್ಡಿ ಅವರು ತಮ್ಮ ಸೃಜನಶೀಲತೆ ಪ್ರದಶಿರ್ಸಿದರು. ಶಿಕ್ಷಕಿ ಶ್ವೇತಾ ಅಂಗಡಿ ಮಾರ್ಗದರ್ಶಕರಾಗಿದ್ದರು.

ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಬೆಳೆಸುವುದು, ಪಾಕಕಲೆಯಲ್ಲಿ ಸೃಜನಶೀಲತೆ ಉತ್ತೇಜಿಸುವುದು, ಪ್ರಾಯೋಗಿಕ ಜೀವನ ಕೌಶಲಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ದೇಶದಾದ್ಯಂತ ಸುಮಾರು 450 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಷ್ಠಿತ ಸ್ಪರ್ಧೆಯಲ್ಲಿ ಆರ್​ವಿಎಸ್​ ಇಂಟರ್​ನ್ಯಾಷನಲ್​ ಪಬ್ಲಿಕ್​ ಸ್ಕೂಲ್​ ವಿದ್ಯಾರ್ಥಿಗಳು ಭಾಗವಹಿಸಿದ್ದು, ಹೆಮ್ಮೆಯ ಕ್ಷಣವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.