ಹುಬ್ಬಳ್ಳಿಯ ಕೆ.ಎಚ್​. ಪಾಟೀಲ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ವಿಜಯವಾಣಿ ಮುದ್ರಣ ಘಟಕ ವೀಕ್ಷಣೆ ಮಾಡಿದರು. 
ಧಾರವಾಡ

ಪ್ರಿಂಟಿಂಗ್ ಟೆಕ್ನಾಲಜಿಗೆ ಬೆರಗಾದ ಯುವ ಸಮೂಹ

ಕೆ.ಎಚ್​. ಪಾಟೀಲ ಕಾಲೇಜ್​ ವಿದ್ಯಾರ್ಥಿಗಳಿಂದ ವಿಜಯವಾಣಿ ಮುದ್ರಣ ವೀಕ್ಷಣೆ

ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಕೆ.ಎಚ್​. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಾಲೂಕಿನ ವರೂರಿನಲ್ಲಿರುವ ಕನ್ನಡದ ನಂಬರ್​ 1 ಪತ್ರಿಕೆ ವಿಜಯವಾಣಿ ಮುದ್ರಣ ಘಟಕಕ್ಕೆ ಭೇಟಿ ನೀಡುವ ಮೂಲಕ ಹೊಸ ಅನುಭವ ಪಡೆದರು.

ಪ್ರಿಂಟಿಂಗ್​ ಪ್ರೆಸ್​ನಲ್ಲಿ ಉತ್ಸಾಹದಿಂದ ಓಡಾಡಿ ಮುದ್ರಣದ ಅನೇಕ ಸಂಗತಿಗಳನ್ನು ತಿಳಿದುಕೊಂಡರು. ಅಧ್ಯಯನ ಪ್ರವಾಸದ ಭಾಗವಾಗಿ ವಿಜಯವಾಣಿ ಪ್ರಿಂಟಿಂಗ್​ ಪ್ರೆಸ್​ಗೆ ಆಗಮಿಸಿ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಕುತೂಹಲದಿಂದ ಹಲವು ಸಂಗತಿಗಳನ್ನು ಕೇಳಿ ತಿಳಿದುಕೊಂಡರು. ಮುದ್ರಣ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿದರು.

ಕಾಲೇಜಿನಲ್ಲಿ ನಿತ್ಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿ ಜ್ಞಾನ ವೃದ್ಧಿಸಿಕೊಳ್ಳುವ ವಿದ್ಯಾರ್ಥಿಗಳು ಇಂದು ಕೆಲವು ತಾಂತ್ರಿಕ ವಿಷಯಗಳನ್ನು ಗಮನಿಸಿದರು.

ವಿಜಯವಾಣಿ ಹಾಗೂ ವಿದ್ಯಾರ್ಥಿ ಉದ್ಯೋಗ ಮಿತ್ರದ ಮೂಲಕ ವೈಜ್ಞಾನಿಕ ಹಾಗೂ ವೈಚಾರಿಕ ಜ್ಞಾನದ ಹಸಿವು ತಣಿಸುತ್ತಿರುವ ವಿಜಯವಾಣಿ ಮುದ್ರಣದ ಮಜಲುಗಳನ್ನು ತಿಳಿದುಕೊಂಡರು. ನವೀನ ತಂತ್ರಜ್ಞಾನದ ವಿಜಯವಾಣಿ ಕಲರ್​ ಪುಟಗಳು, ವಿನ್ಯಾಸ, ಮುದ್ರಣದೊಂದಿಗೆ ಹೊರಬರುವುದನ್ನು ತದೇಕಚಿತ್ತದಿಂದ ವೀಸಿದರು.

ನಿತ್ಯವೂ ಮನೆಗೆ ಬರುವ ಕನ್ನಡದ ನಂಬರ್​ ಒನ್​ ಪತ್ರಿಕೆ ವಿಜಯವಾಣಿಯು ಹೇಗೆಲ್ಲ ಪ್ರಿಂಟ್​ ಆಗುತ್ತದೆ, ಓದುಗರ ಮನೆಗೆ ಹೇಗೆ ತಲುಪುತ್ತದೆ, ಈ ಮಧ್ಯೆ ಇದಕ್ಕಾಗಿ ಸಿಬ್ಬಂದಿಯ ಪರಿಶ್ರಮ ಎಷ್ಟು ಎಂಬ ಸಂಗತಿಗಳನ್ನು ತಿಳಿದುಕೊಂಡರು.

ವಿಜಯವಾಣಿ ಮುದ್ರಣ ವಿಭಾಗವು ನಮಗೆ ಹಾಗೂ ವಿದ್ಯಾರ್ಥಿಗಳಿಗೆ ಹೊಸಲೋಕದ ಪರಿಚಯ ಮಾಡಿತು. ಇಲ್ಲಿನ ಸಿಬ್ಬಂದಿ ಉತ್ತಮ ಮಾರ್ಗದರ್ಶನ ನೀಡಿದರು. ನಿತ್ಯ ನಾವೆಲ್ಲ ಓದುವ ಪತ್ರಿಕೆ ಹೇಗೆ ಪ್ರಿಂಟ್​ ಆಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಪತ್ರಿಕೆ ಹೊರತರಲು ಎಷ್ಟೊಂದು ಪರಿಶ್ರಮ ಇದೆ ಎಂಬುದು ಗೊತ್ತಾಯಿತು. ಯುವಕರು, ವಿದ್ಯಾರ್ಥಿಗಳು ರೀಲ್ಸ್​ ಹುಚ್ಚು ಬಿಟ್ಟು ರೀಡಿಂಗ್​ ಹ್ಯಾಬಿಟ್​ ಬೆಳೆಸಿಕೊಳ್ಳಬೇಕು. ಮುದ್ರಣದ ಸಂಗತಿಗಳನ್ನು ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಡಾ. ವಿಜಯ ಸಂಕೇಶ್ವರ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರಿಗೆ ಧನ್ಯವಾದ ತಿಳಿಸುತ್ತೇವೆ ಎಂದು ಗ್ರಂಥಪಾಲಕ ಜಿ.ಪಿ. ಹಂಜಗಿಮಠ ತಿಳಿಸಿದರು.