ನವಲಗುಂದ: ಉತ್ತರ ಕರ್ನಾಟಕದಲ್ಲಿ ದೊಡ್ಡ ಭಕ್ತ ಸಮೂಹ ಹೊಂದಿರುವ ಧಾರ್ಮಿಕ ಕ್ಷೇತ್ರಗಳಲ್ಲಿ ತಾಲೂಕಿನ ಯಮನೂರಿನ ಚಾಂಗದೇವರ ಮಹಾರಾಜರ ಕ್ಷೇತ್ರವು ಹಿಂದೂ-ಮುಸ್ಲಿಂ ಭಾವೈಕ್ಯದ (Hindu-Muslim unity) ತಾಣವೆಂದೇ ಪ್ರಸಿದ್ಧವಾಗಿದೆ.
ಚಾಂಗದೇವ ಮಹಾರಾಜರು ಮುಪ್ಪು-ಸಾವನ್ನೂ ಮೀರಿ 14 ನೂರು ವರ್ಷ ಕಾಲ ಬದುಕನ್ನು ಸಾಗಿಸುತ್ತಿದ್ದಾಗ ವಿಠೋಬ ದೇವರು, ಏಕಪ್ಪ ವ್ಯರ್ಥ ಕಾಲಹರಣಕ್ಕೆ ಮಾರುಹೋಗಿದ್ದಿ ಎಂದು ಸ್ವಪ್ನ ಸಂದೇಶ ನೀಡಿದರಂತೆ. ಆಗ ಚಾಂಗದೇವ ಮಹಾರಾಜರು ಮಹಾರಾಷ್ಟ್ರದ ಮಹಿಮಾಪುರುಷ, ಸಂತಶ್ರೇಷ್ಠ ಜ್ಞಾನದೇವರಿಂದ ದೀಕ್ಷೆ ಪಡೆದು ಧರ್ಮೋದ್ಧಾರ, ಭಕ್ತ ಪರಿಪಾಲನೆಗೆ ಮುಂದಾದರು.
ಮಹಾರಾಷ್ಟ್ರದ ಕ್ಷೇತ್ರೋಜಿರಾವ್ ಬರ್ಗೆ ಎಂಬ ಭಕ್ತ ಚಾಂಗದೇವರ ಶಿಷ್ಯನಾಗಿದ್ದ. ಚಾಂಗದೇವರ ಮಹಾರಾಜರು ಬರ್ಗೆ ಅವರೊಂದಿಗೆ ನವಲಗುಂದ ತಾಲೂಕಿನ ಯಮನೂರ ಗ್ರಾಮಕ್ಕೆ ಆಗಮಿಸಿ, ಅಲ್ಲಿ ನರಸಿಂಹ ಸಾಲಿಗ್ರಾಮವೊಂದನ್ನು ಪ್ರತಿಷ್ಠಾಪಿಸಿದರು. ಗುರುವಿನ ಆಜ್ಞೆಯಂತೆ ಕ್ಷೇತ್ರೋಜಿರಾವ್ ಬರ್ಗೆ ಅವರು ಸಾಲಿಗ್ರಾಮಕ್ಕೆ ತನ್ನ ಬೆರಳಿನ ಐದು ಹನಿ ರಕ್ತದಿಂದ ಪೂಜಿಸುತ್ತಿದ್ದರು. ಬರ್ಗೆಯವರು ಮುಂದಿನ ಪೀಳಿಗೆಯು ರಕ್ತದಿಂದ ಪೂಜೆ ಮಾಡಲು ಸಾಧ್ಯವಿಲ್ಲ ಎಂದುಕೊಂಡು ಸಾಲಿಗ್ರಾಮ ಮುಚ್ಚಿಸಿ, ಗದ್ದುಗೆ ರೂಪ ನೀಡಿದರು. ಅಂದಿನಿಂದ ಇಂದಿಗೂ ಬರ್ಗೆ ಮನೆತನದವರೇ ಕ್ಷೇತ್ರದ ಅರ್ಚಕರು.
ಹುಲಿಯೇ ವಾಹನ: ಜ್ಞಾನದೇವರನ್ನು ಕಾಣಲು ಚಾಂಗದೇವರು ಹುಲಿಯನ್ನೇ ವಾಹನ, ಚೇಳನ್ನು ಮೂಗುದಾರ, ಹಾವಿನ ಬಾರಕೋಲು ಮಾಡಿಕೊಂಡು ಹೋಗಿದ್ದರು. ಚಾಂಗದೇವರು ವೇಷ ಕಂಡ ಜ್ಞಾನದೇವ ಮಹಾರಾಜರು ತಾವು ಕುಳಿತ ಗೋಡೆಯನ್ನೇ ನಡೆಸಿಕೊಂಡು ಬಂದಿದ್ದರು. ಇದನ್ನು ಕಂಡ ಚಾಂಗದೇವರಲ್ಲಿನ ಅಹಂ ಮಾಯವಾಗಿ ಜ್ಞಾನದೇವರಿಗೆ ಶರಣಾದರು. ಅಂದಿನಿಂದಲೇ ಹಿಂದು ಭಕ್ತರಿಗೆ ಚಾಂಗದೇವ ಮಹಾರಾಜರಾಗಿ, ಮುಸ್ಲಿಮರಿಗೆ ರಾಜಾ ಬಾಗಸವಾರ ಎಂದೇ ಆರಾಧ್ಯ ದೈವವಾದರು.
ಹೋಳಿ ಹುಣ್ಣಿಮೆ ನಂತರ ಯಮನೂರಿನಲ್ಲಿ ಒಂದು ತಿಂಗಳ ಕಾಲ ದೊಡ್ಡ ಜಾತ್ರೆ ನಡೆಯುತ್ತದೆ. ಪೂಜಾರಿಗಳಿಂದ ಪೂಜೆ, ಪೀರಾಗಳಿಂದ ಕುರಾನ್ ಓದಿಕೆ(ಫಾತೀಹಾ) ಏಕಕಾಲಕ್ಕೆ ನಡೆಯುವುದರಿಂದ ಈ ಕ್ಷೇತ್ರಕ್ಕೆ ಲಕ್ಷಾತಂತ ಭಕ್ತರು ಆಗಮಿಸಿ ಬೆಣ್ಣೆ ಹಳ್ಳದಲ್ಲಿ ಮಿಂದೆದ್ದು ದರ್ಶನ ಪಡೆಯುತ್ತಾರೆ. ಹೊರ ಜಿಲ್ಲೆಗಳು, ಹೊರ ರಾಜ್ಯದಿಂದ ಜಾತಿ-ಮತ ಭೇದವಿಲ್ಲದೆ ಸಮರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹಿಂದು-ಮುಸ್ಲಿಮರಲ್ಲದೆ ವಿಶೇಷವಾಗಿ ಮಹಾರಾಷ್ಟ್ರದಿಂದಲೂ ಭಕ್ತರು ಬರುತ್ತಾರೆ. ಈ ಜಾತ್ರೆ ಧರ್ಮ, ದೈವ, ಭಕ್ತಿ-ಶ್ರದ್ಧಾ ಕೇಂದ್ರವಾಗಿ ಅಪೂರ್ವ ಸಂಗಮವಾಗಿ ನಾಡಿನಲ್ಲೇ ವಿಶಿಷ್ಟವೆನಿಸಿದೆ.
ಚರ್ಮರೋಗ ನಿವಾರಕ ಬೆಣ್ಣೆ ಹಳ್ಳದ ನೀರು: ಯಮನೂರ ಗ್ರಾಮದ ಹತ್ತಿರ ಹರಿಯುವ ಬೆಣ್ಣೆಹಳ್ಳದ ನೀರು ಚರ್ಮರೋಗ ನಿವಾರಕವಾಗಿದೆ ಎಂದು ಎಂಬುದು ಭಕ್ತರ ನಂಬಿಕೆ. ಜಾತ್ರೆಗೆ ಆಗಮಿಸುವ ಭಕ್ತರು ಹಳ್ಳದಲ್ಲಿ ಸ್ಥಾನ ಮಾಡಿ ದೇವರ ದರ್ಶನ ಮಾಡುತ್ತಾರೆ. ಜತೆಗೆ ತಮ್ಮ-ತಮ್ಮ ಕುಟುಂಬದವರಿಗಾಗಿ ಹಳ್ಳದ ನೀರನ್ನು ತೆಗೆದುಕೊಂಡು ಹೋಗುತ್ತಾರೆ.
ಒಂದು ತಿಂಗಳು ಜಾತ್ರೆ: ಯಮನೂರ ಗ್ರಾಮದ ಶ್ರೀ ಚಾಂಗದೇವ(ರಾಜಾ ಬಾಗಸವಾರ) ಮಹಾರಾಜರ ಜಾತ್ರಾ ಮಹೋತ್ಸವ ಮಾ. 6ರಿಂದ ಒಂದು ತಿಂಗಳ ಕಾಲ ನಡೆಯಲಿದೆ. 7ರಂದು ಗಂಧಾಭಿಷೇಕ (ಸಂದಲ್), 8 ರಂದು ಪುಣ್ಯತಿಥಿ (ಉರುಸು) ಜರುಗಲಿದೆ. ಗಂಧಾಭಿಷೇಕ ನಿಮಿತ್ತ ಮಾ. 7ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬರ್ಗೆ ಮನೆತನದ ಸಂತರು ಚಾಂಗದೇವ ಮಹಾರಾಜರ ದರ್ಗಾದಿಂದ ಬೆಣ್ಣೆಹಳ್ಳದವರೆಗೆ ಪಾದಯಾತ್ರೆ ಮೂಲಕ ತೆರಳಿ, ಬೆಣ್ಣೆಹಳ್ಳದ ನೀರಿನಿಂದ ದೀಪ ಹಚ್ಚುತ್ತಾರೆ. ಪೀರಾಗಳು ಓದಿಕೆ ಪಠಿಸಿದರೆ, ಪೂಜಾರಿಗಳು ಮಂತ್ರ ಪಠಣ ಮಾಡುತ್ತಾರೆ.