ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಶ್ವ ಜಲ ದಿನಾಚರಣೆ
ಧಾರವಾಡ: ನೀರು ಯಾವುದೇ ಪ್ರದೇಶಕ್ಕೆ ಸೀಮಿತವಾದ ವಸ್ತುವಲ್ಲ. ನೀರಿಗೆ ಯಾವುದೇ ಗಡಿ ಇಲ್ಲ. ನೀರು ಸಮುದಾಯದ ಆಸ್ತಿ. ಮಾನವನು ಸಂಪನ್ಮೂಲಗಳ ಸರಿಯಾದ ಬಳಕೆ ಕಲಿಯಬೇಕು ಎಂದು ರಾಜ್ಯೋತ್ಸವ ಪುರಸತ, ಪರಿಸರವಾದಿ ಡಿ.ಎ. ಚೌಡಪ್ಪ ಹೇಳಿದರು.
ನಗರದ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನೀರನ್ನು ಸಮುದಾಯದ ಜವಾಬ್ದಾರಿ ಎಂದು ಗೌರವಿಸಬೇಕು. ದೇಶಕ್ಕೆ ರಾಷ್ಟ್ರೀಯ ಜಲ ಕಾಯ್ದೆ ಪ್ರಸಕ್ತ ಅಗತ್ಯತೆಯಾಗಿದೆ. ಆಡಳಿತದ ಕೆಳಸ್ಥರವಾದ ಗ್ರಾಮ ಹಂತದಲ್ಲಿ ಬೇಕಾದ ವಾಟರ್ ಬಜೆಟ್ ಮಹತ್ವ ಪಡೆದಿದೆ. ಭಾರತವು ವಾಸ್ತವವಾಗಿ ಜಲ ಸಮದ್ಧ ರಾಷ್ಟ್ರವಾಗಿದ್ದು, ಅಸಮರ್ಪಕ ನಿರ್ವಹಣೆ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ನೀರಿನ ಕೊರತೆ ಉಂಟಾಗುತ್ತಿದೆ. ಮಹಾರಾಜ ಕರಿಕಾಲ ಚೋಳ, ಮೆಸೂರು ಸಂಸ್ಥಾನದ ಮಹಾರಾಣಿ ಕೆಂಪನಂಜಮ್ಮಣ್ಣಿ, ಸರ್ ಆರ್ಥರ್ ಕಾಟನ್, ಜಾನ್ ಪೆನ್ನಿಕ್ಯೂಕ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯನಂಥವರ ದೂರದಷ್ಟಿಯು ವರ್ತಮಾನದ ಜಲ ಭದ್ರತೆಗೆ ಕಾರಣ. ಯುವ ಪೀಳಿಗೆಯು ಭವಿಷ್ಯದ ಹಿತಕ್ಕಾಗಿ ಜಲ ಸಂರಣೆಗೆ ಆದ್ಯತೆ ನೀಡಬೇಕು ಎಂದರು.
ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಮಾತನಾಡಿ, ನೀರು ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು, ಆಯಾ ಕಾಲಗಳಲ್ಲಿ ಚಕ್ರಿಕ ಬದಲಾವಣೆಗಳಿಗೆ ಒಳಪಟ್ಟಿದೆ. ಆದರೆ, ನಮ್ಮ ತಿಳಿಗೇಡಿತನದಿಂದಾಗಿ ಭವಿಷ್ಯದಲ್ಲಿ ನೀರಿನ ಕೊರತೆ ಎದುರಿಸಬಹುದಾಗಿದೆ ಎಂದು ಎಚ್ಚರಿಸಿದರು.
ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ. ಶ್ರುತಿ ಕಂಬಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.