24ನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ
ಧಾರವಾಡ: ಪೊಲೀಸರು ತಮ್ಮ ಕರ್ತವ್ಯವನ್ನು ಶಿಸ್ತು ಬದ್ಧವಾಗಿ ಶ್ರದ್ದೆಯಿಂದ ಮಾಡಬೇಕು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರು ಸಮವಸ್ತ್ರ ಹಾಗೂ ತಾವು ಮಾಡುವ ಕೆಲಸದ ಬಗ್ಗೆ ಹೆಮ್ಮೆ ಹೊಂದಿರಬೇಕು. ಪೊಲೀಸರು ಸತ್ಯ, ನಿಷ್ಠೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಮುಂದಾಗಬೇಕು ಎಂದು ಬೆಂಗಳೂರಿನ ತರಬೇತಿ ಪೊಲೀಸ್ ಉಪ ಮಹಾನೀರಿಕ್ಷಕ ಡಿ. ದೇವರಾಜ ಅವರು ಹೇಳಿದರು.
ನಗರದ ಡಿ.ಎ.ಆರ್. ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಜರುಗಿದ 24ನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪೊಲೀಸ್ ಪ್ರಶಿಕ್ಷಣಾರ್ಥಿ ತಂಡಗಳ ಪಥಸಂಚಲನ ವೀಕ್ಷಣೆ ಮಾಡಿ ಮಾತನಾಡಿದರು. ಕ್ರಿಮಿನಲ್‌ಗಳ ಜತೆ ಪೊಲೀಸ್ ಒಡನಾಟವು ವೈಯಕ್ತಿಕವಾಗಿ ಇರಬಾರದು. ಕೈದಿಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ, ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಅಥವಾ ಆಸ್ಪತ್ರೆಗೆ ಸುರಕ್ಷಿತವಾಗಿ ಕರೆದೊಯ್ಯುವ ಮತ್ತು ಮರಳಿ ಕರೆತರುವ ಜವಾಬ್ದಾರಿ ಮಾತ್ರ ನಿರ್ವಹಿಸಬೇಕು. ವೈಯಕ್ತಿಕ ಜೀವನದ ಬಗ್ಗೆ ಸಂಭಾಷಣೆ ಮಾಡಬಾರದು ಎಂದು ಹೇಳಿದರು.
ಪಥ ಸಂಚಲನದ ಪ್ರಧಾನ ದಂಡ ನಾಯಕರಾಗಿ ಧಾರವಾಡ ಡಿಎಆರ್‌ನ ಉಪ ಪೊಲೀಸ್ ಅಧೀಕ್ಷಕ ಮತ್ತು ಉಪ ಪ್ರಾಚಾರ್ಯ ಡಿ.ಎಸ್. ಧನಗರ ಹಾಗೂ ಉಪ ದಂಡನಾಯಕರಾಗಿ ಡಿಎಆರ್‌ನ ಆರ್.ಪಿ.ಐ. ಫಕ್ಕಿರಪ್ಪ ಆರ್. ಡೊಕ್ಕಣವರ ಅವರ ನೇತೃತ್ವದಲ್ಲಿ 4 ತಂಡಗಳು ಪಥ ಸಂಚಲನ ಪ್ರದರ್ಶಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರತಿಜ್ಞಾವಿಽ ಬೋಧಿಸಿ, ತರಬೇತಿ ಶಾಲೆಯ ಬಗ್ಗೆ ವರದಿ ವಾಚಿಸಿದರು.
ಪೊಲೀಸ್ ಪ್ರಶಿಕ್ಷಣಾರ್ಥಿಗಳ ತರಬೇತಿಯಲ್ಲಿ ಒಳಾಂಗಣ ವಿಷಯದಲ್ಲಿ ಪಾರೀಶನಾಥ ಮುತ್ತೂರ ಪ್ರಥಮ, ಶಿವಾನಂದ ಕರೂರ ದ್ವಿತೀಯ, ನರಸಿಂಹ ಸೇವು ತೃತೀಯ ಬಹುಮಾನ ವಿತರಿಸಲಾಯಿತು. ಹೊರಾಂಗಣ ವಿಷಯದಲ್ಲಿ ಕರಿಯಪ್ಪ ಲಕ್ಕುಂಡಿ ಪ್ರಥಮ, ಕಿರಣ ಕುಮಾರ ಜಿ. ದ್ವಿತೀಯ, ಪ್ರಮೋಧ ಕೆ.ಎಸ್. ಅವರಿಗೆ ತೃತೀಯ ಬಹುಮಾನ ವಿತರಿಸಲಾಯಿತು.
ಫೈರಿಂಗ್ ವಿಷಯದಲ್ಲಿ ಮಂಜುನಾಥ ತಲ್ಲೂರ ಪ್ರಥಮ, ರೇಣುರೆಡ್ಡಿ ಬಾಡಗಿ ದ್ವಿತೀಯ, ವಿಠ್ಠಲ ಹೊನ್ನಿಕೊಳ್ಳ ತೃತೀಯ ಮತ್ತು ವಿಶೇಷ ಬಹುಮಾನ ಸರ್ವೋತ್ತಮ ಪ್ರಶಸ್ತಿ ಪಡೆದ ಪ್ರಶಿಕ್ಷಣಾರ್ಥಿ ಪರೀಶನಾಥ ಮುತ್ತೂರ ಅವರಿಗೆ ಬಹುಮಾನ ವಿತರಿಸಲಾಯಿತು.
ಡಿಸಿಪಿ ಶೃತಿ ಎನ್.ಎಸ್., ಕಲಘಟಗಿ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಅಧೀಕ್ಷಕ ಎಂ.ಎ. ಯಾದವಾಡ, ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಅಧೀಕ್ಷಕ ಸತೀಶ್ ಚಿಟಗುಪ್ಪಿ ವೇದಿಕೆಯಲ್ಲಿದ್ದರು. ಧಾರವಾಡ ಪೊಲೀಸ್ ಉಪ ಅಧೀಕ್ಷಕ ಶಿವಾನಂದ ಕಟಗಿ ಸ್ವಾಗತಿಸಿದರು. ಧಾರವಾಡ ಗ್ರಾಮೀಣ ಪೊಲೀಸ್ ಉಪ ಅಧೀಕ್ಷಕ ವಿನೋದ ಮುಕ್ತೆದಾರ ವಂದಿಸಿದರು.