‘ವರ್ಣ ಸಂಭ್ರಮ-5’ರಲ್ಲಿ (womensday) ಬೆಳಗಾವಿಯ ಹಿರಿಯ ಕಲಾವಿದೆ ಮೀನಾಕ್ಷಿ ಸದಲಗಿ ಅವರಿಗೆ ‘ಸರ್ವವರ್ಣಾತ್ಮಿಕೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹುಬ್ಬಳ್ಳಿ: ಕಲೆ ಮತ್ತು ಸಾಹಿತ್ಯಕ್ಕೆ ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಅನುದಾನ ಮೀಸಲಿಡುವ ಕುರಿತು ಹಿರಿಯರೊಂದಿಗೆ ಚರ್ಚಿಸಿ (womensday) ತೀರ್ಮಾನಿಸಲಾಗುವುದು ಎಂದು ಮೇಯರ್ ಜ್ಯೋತಿ ಪಾಟೀಲ ಭರವಸೆ ನೀಡಿದರು.
ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಕುಂಚಬ್ರಹ್ಮ ಡಾ. ಎಂ.ವಿ. ಮಿಣಜಗಿ ಕಲಾ ಮಂದಿರ ಸಮಿತಿ ವತಿಯಿಂದ ಪಾಲಿಕೆ ವಲಯ ಕಚೇರಿ 5ರ ಮೊದಲ ಮಹಡಿ ಚಿಕ್ಕವೀರಯ್ಯ ಕಟ್ಟಡದಲ್ಲಿ ಭಾನುವಾರ ಏರ್ಪಡಿಸಿದ್ದ ‘ವರ್ಣ ಸಂಭ್ರಮ-5’ ರಾಜ್ಯಮಟ್ಟದ ಮಹಿಳಾ ಸಮೂಹ ಚಿತ್ರಕಲಾ ಪ್ರದರ್ಶನ ಹಾಗೂ ‘ಸರ್ವವರ್ಣಾತ್ಮಿಕೆ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲೆಗೆ ಬೆಲೆ ಕಟ್ಟಲು ಆಗುವುದಿಲ್ಲ. ಕಲೆಯಿಂದ ಸಮಾಜಕ್ಕೆ ದಾರಿ ದೀಪ ಸಿಗುತ್ತಿದೆ. ಭಾರತದ ಸಂಸ್ಕೃತಿ, ಕಲೆಗೆ ಬೆಲೆ ಕೊಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಡಾ. ಎಂ.ವಿ. ಮಿಣಜಗಿ ಕಲಾ ಮಂದಿರಕ್ಕೆ ಶಾಶ್ವತ ಕಟ್ಟಡ ಪ್ರಮಾಣ ಪತ್ರ ಕೊಡುವ ಕೆಲಸ ಮಾಡಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶಾಲ ಅಬ್ಬಯ್ಯ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿಯೂ ಮಿಂಚುತ್ತಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವೇ ಇದಕ್ಕೆ ಕಾರಣ ಎಂದರು.
ನಿವೃತ್ತ ಪ್ರಾಧ್ಯಾಪಕಿ ಡಾ. ಭಾರತಿ ಹಿರೇಮಠ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಗೆ ಮುನ್ನವೇ ನಮ್ಮ ಶರಣರು 12ನೇ ಶತಮಾನದಲ್ಲಿ ಸಮಾನತೆ ಸಂದೇಶ ಸಾರಿದರು. ಒಳಗೆ ಸುಳಿವಾತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಂದುಸುರಿದರು. ಮನದ ಮುಂದಣ ಆಸೆಯೇ ಮಾಯೆ ಎಂಬ ಅಂಶಗಳನ್ನು ವಚನದಲ್ಲಿ ಉಲ್ಲೇಖಿಸಿದ್ದರು ಎಂದು ವಿವರಿಸಿದರು.
ಬೆಳಗಾವಿಯ ಹಿರಿಯ ಕಲಾವಿದೆ ಮೀನಾಕ್ಷಿ ಸದಲಗಿ ಅವರಿಗೆ ‘ಸರ್ವವರ್ಣಾತ್ಮಿಕೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
ಮಂಜುನಾಥ ಕರಿಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಕಲಾವಿದ ಆರ್.ಬಿ. ಗರಗ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಧಿರೇನ್ ಠಕ್ಕರ್, ಇತರರು ಇದ್ದರು. ವೈಭವಿ ಕುಲಕರ್ಣಿ ಭರತನಾಟ್ಯ ಮನೋಜ್ಞವಾಗಿ ಮೂಡಿಬಂತು.