ಧಾರವಾಡ: ಸಾರಿಗೆ ಸಂಸ್ಥೆಯ ಬಸ್ನ ಎಕ್ಸಲ್ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಂದಕಕ್ಕೆ ಜಾರಿದ ಪರಿಣಾಮ ಪ್ರಯಾಣಿಕರೊಬ್ಬರು ಮೃತಪಟ್ಟು ಸುಮಾರು 15 ಜನ ಗಾಯಗೊಂಡ ಘಟನೆ ಧಾರವಾಡ& ಸವದತ್ತಿ ರಸ್ತೆಯ ಕಾಶಿನಗರದ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.
ಅಪಘಾತಕ್ಕೀಡಾದ ಬಸ್ ದಾವಣಗೆರೆಯಿಂದ ಧಾರವಾಡ& ಸವದತ್ತಿ ಮಾರ್ಗವಾಗಿ ಮೀರಜ್ಗೆ ಹೊರಟಿತ್ತು. ಈ ವೇಳೆ ಎಕ್ಸಲ್ ಕಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಜಾರಿದೆ. ಗಾಯಗೊಂಡ ಮುನವಳ್ಳಿಯ ಹುಸೇನಬಿ ಕೆಂಗಾನೂರ ಎಂಬ ಮಹಿಳೆ ಮೃತಪಟ್ಟು, ಇನ್ನೊಬ್ಬ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಸುಮಾರು 15 ಜನ ಗಾಯಗೊಂಡಿದ್ದು, ಅವರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಸ್ ಪಲ್ಟಿಯಾಗುತ್ತಿದ್ದಂತೆ ಅಕ್ಕಪಕ್ಕದ ಜಮೀನುಗಳಲ್ಲಿದ್ದ ಜನರು ಆ್ಯಂಬುಲೆನ್ಸ್ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ 112 ಪೊಲೀಸ್ ಸಿಬ್ಬಂದಿ ಮತ್ತು ಗ್ರಾಮೀಣ ಠಾಣೆ ಪೊಲೀಸರು ಸ್ಥಳಿಯರ ನೆರವಿನಿಂದ ಬಸ್ನಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಹೊರಗೆ ತೆಗೆದರು. ಸ್ಥಳಕ್ಕೆ 4 ಆ್ಯಂಬುಲೆನ್ಸ್ಗಳನ್ನು ಕರೆಸಿ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರು.