ಪ್ರಲ್ಹಾದ ಜೋಶಿ 
ಧಾರವಾಡ

ಲೋಕಾಯುಕ್ತ ದಾಳಿ ವೇಳೆ ಇದ್ದ ಕಾಂಗ್ರೆಸ್​ ಮುಖಂಡರು ಯಾರು?

ಧಾರವಾಡ: ಧಾರವಾಡ ತಹಸೀಲ್ದಾರ್​ ಸಚ್ಚಿದಾನಂದ ಕುಚನೂರ ಅವರ ಮೇಲೆ ಕರ್ನಾಟಕ ಕಾಲೇಜು ಆವರಣದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್​ನ ನಾಯಕರಿದ್ದಾರೆ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಈ ಪ್ರಕರಣ ಸಮಗ್ರ ತನಿಖೆ ಆಗಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು.
ತಾಲೂಕಿನ ಮನಗುಂಡಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರ ದಾಳಿ ವೇಳೆ ಸ್ಥಳದಲ್ಲಿ ಯಾರ್ಯಾರು ಇದ್ದರು? ಯಾರ ಒತ್ತಡದ ಮೇಲೆ ಅವರನ್ನು ಕೈ ಬಿಡಲಾಗಿದೆ ಎಂಬುದನ್ನು ತನಿಖೆ ಮೂಲಕ ಬಹಿರಂಗ ಪಡಿಸಬೇಕು. ಒತ್ತಡದ ಹಿನ್ನೆಲೆಯಲ್ಲಿ ಅಲ್ಲಿದ್ದ ರಾಜಕೀಯ ಮುಖಂಡರನ್ನು ಬಿಟ್ಟು ಕಳುಹಿಸಲಾಗಿದೆ. ಈ ಬಗ್ಗೆ ತಮಗೆ ಮಾಹಿತಿ ಇದ್ದು, ಲೋಕಾಯುಕ್ತ ಪೊಲೀಸರಿಗೂ ಎಲ್ಲವೂ ಗೊತ್ತಿದೆ. ಅಗತ್ಯ ಬಿದ್ದರೆ ಉಪಲೋಕಾಯಕ್ತರು ಬಂದು ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್​ ಎಂದರೆ, ಭ್ರಷ್ಟಾಚಾರ, ದುರಾಡಳಿತ. ಕಾಂಗ್ರೆಸ್​ ಸರ್ಕಾರದ ದುರಾಡಳಿತದಲ್ಲಿ ಪಕ್ಷದ ರಾಜಕಾರಣಿಗಳು ಇದ್ದಾರೆ. ಅಧಿಕಾರಿಗಳು ಅವರಿಗೆ ದೊಡ್ಡ ಮೊತ್ತ ನೀಡಿ ವರ್ಗ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆ ಬಲವಾಗಿದ್ದರಿಂದ ಇಂತಹ ದಾಳಿಗಳು ನಡೆಯುತ್ತಿದ್ದು, ಇಂತಹ ಸಂಸ್ಥೆಯನ್ನು ಕಾಂಗ್ರೆಸ್​ ಸರ್ಕಾರ ರ್ದುಬಲಗೊಳಿಸುತ್ತಿದೆ. ಕಾಂಗ್ರೆಸ್​ನ ಕೆಟ್ಟ ವ್ಯವಸ್ಥೆಯಿಂದ ಲೋಕಾಯುಕ್ತ ಸಂಸ್ಥೆಯು ಸಹ ಸಿಕ್ಕಿ ಹಾಕಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಯುಪಿಐ ವಹಿವಾಟುಗಳಿಗೆ ಶೇ. 0.4ರಷ್ಟು ಎಂಡಿಆರ್​ (ಮರ್ಚೆಂಟ್​ ಡಿಸ್ಕೌಂಟ್​ ದರ) ಶುಲ್ಕ ಅನ್ವಯವಾಗುತ್ತಿದೆ. ಸಂಬಂಧಿಕರ ಜತೆ ಎಷ್ಟೇ ವ್ಯವಹಾರ ಮಾಡಿದರೂ ಅದಕ್ಕೆ ಶುಲ್ಕ ಇರುವುದಿಲ್ಲ. ಗೂಗಲ್​ ಪೇ, ಪೋನ್​ ಪೇ ಸೇರಿ ಇತ್ಯಾದಿ ಡಿಜಿಟಲ್​ ಆ್ಯಪ್​ಗಳನ್ನು ನಿರ್ವಹಣೆ ಮಾಡುವ ಏಜೆನ್ಸಿಗಳದ್ದೂ ಬಹಳಷ್ಟು ಖರ್ಚು ಇರುತ್ತದೆ. ಇದನ್ನು ಬಹಳಷ್ಟು ಅಧ್ಯಯನ ಮಾಡಿಯೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಡೀ ಜಗತ್ತಿನಲ್ಲಿ ಇದನ್ನು ವಿಸ್ತರಿಸಬೇಕು ಎಂಬ ಅಭಿಪ್ರಾಯ ಬಂದಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಾವಿರಾರು ಕೋಟಿ ರೂ. ಖರ್ಚು ಮಾಡಿದೆ. ಇದಕ್ಕೆ ವೆಚ್ಚ ಇಲ್ಲದೇ ಕೆಲಸ ಆಗುವುದಿಲ್ಲ ಎಂದರು.