ಧಾರವಾಡ: ಇತ್ತೀಚಿಗೆ ಲೋಕಾಯುಕ್ತ ದಾಳಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದ ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರ ಹಿಂದೆ ದೊಡ್ಡ ವ್ಯಕ್ತಿಗಳಿದ್ದು, ಆ ವ್ಯಕ್ತಿಗಳ ಬಗ್ಗೆ ಲೋಕಾಯುಕ್ತರು ತನಿಖೆ ನಡೆಸಬೇಕು ಎಂದು ಮಹಾನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಗುರುರಾಜ ಹುಣಶಿಮರದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಧಾರವಾಡ ನಗರದ ಹೃದಯ ಭಾಗವಾದ ಕೆಸಿಡಿ ಆವರಣದಲ್ಲಿ ಬಹಿರಂಗವಾಗಿ ಲಂಚ ಪಡೆದ ತಹಸೀಲ್ದಾರ್ ಪ್ರಕರಣ ಇಡೀ ರಾಜಕೀಯ ವ್ಯವಸ್ಥೆಯನ್ನು ಅವಮಾನಿಸುವ ಟನೆಯಾಗಿದೆ. ಈ ಬಗ್ಗೆ ಎಲ್ಲರೂ ನಾಚಿಕೆ ಪಡುವಂತಾಗಿದೆ. ಧಾರವಾಡ ಜಿಲ್ಲೆಯ ಬಹುತೇಕ ಎಲ್ಲ ಇಲಾಖೆಗಳಲ್ಲಿ ಭ್ರಷ್ಟ ಅಧಿಕಾರಿಗಳು ತುಂಬಿಕೊಂಡಿದ್ದಾರೆ. ಅದರಲ್ಲಿಯೂ ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪಿಸಿದರು.
ಇತ್ತೀಚಿನ ದಿನಗಳಲ್ಲಿ ಭೂಮಿ ಬೆಲೆ ಹೆಚ್ಚಳ ಆಗಿದ್ದರಿಂದ ನಗರ ಪಕ್ಕದ ರೈತರ ಜಮೀನಿಗಳ ದಾಖಲೆ ತಿದ್ದುಪಡಿ ಮಾಡಿ, ನಕಲಿ ದಾಖಲೆ ಸೃಜಿಸಿ ವಂಚಿಸುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅಧಿಕಾರಿಗಳು ಭೂ ದಾಖಲೆಗಳಲ್ಲಿ ಮನಬಂದಂತೆ ತಿದ್ದುಪಡಿ ಮಾಡುತ್ತ, ಶ್ರೀಮಂತ ಕುಳಗಳು ಖರೀದಿ ಮಾಡಿದ ನಂತರ ದಾಖಲೆ ಸರಿಪಡಿಸುವ ಕೆಲಸವನ್ನು ಅಧಿಕಾರಿಗಳನ್ನು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಕೋಟಿಗಟ್ಟಲೆ ಹಣ ನೀಡಿ ವಗಾವಣೆ ಮಾಡಿಸಿಕೊಂಡು ಬಂದಿದ್ದು, ನಮ್ಮನ್ನು ಯಾರೂ ಏನೂ ಮಾಡಲಾರರು ಎಂದು ಅಧಿಕಾರಿಗಳು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು. ಇಂತಹ ಭ್ರಷ್ಟ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಪತ್ರ ನೀಡಿದವರ ಬಗ್ಗೆಯೂ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಯರಿಕೊಪ್ಪದ ರೈತ ಬಸವರಾಜ ಅಂಗಡಿ ಮಾತನಾಡಿ, ಯರಿಕೊಪ್ಪ ಗ್ರಾಮದ ಸರ್ವೇ ನಂಬರ್ 12ರ ಒಟ್ಟು 33 ಎಕರೆ 15 ಗುಂಟೆ ಜಮೀನು ನನ್ನ ತಂದೆ ಮತ್ತು ಅಂಗಡಿ ಕುಟುಂಬದವರ ಹೆಸರಲ್ಲಿದೆ. ಅನಧಿಕೃತವಾಗಿ ಸಿಮೆಂಟ್ ಫ್ಯಾಕ್ಟರಿ ಹಾಕಿದ್ದಾರೆ. ದಾಖಲೆ ಇಲ್ಲದೆ ಹೆಸ್ಕಾಂನವರು ವಿದ್ಯುತ್ ಸಂಪರ್ಕ ನೀಡಿದ್ದಾರೆ. ಈಗಲೂ ನಮ್ಮದೇ ಮಾಲೀಕತ್ವ ಇದ್ದು, ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ. ಆದರೂ ಕೆಲವರು ಫೂಟ್ ಖರಾಬ್ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ. ಈ ಸಂಬಂಧ ನನ್ನ ಹಾಗೂ ತಂದೆಯ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ ಎಂದರು.
ಶಿವಪುತ್ರಪ್ಪ ಅಂಗಡಿ, ಚನ್ನಪ್ಪಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿದ್ದರು.