western ghat ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿದರು. 
ಧಾರವಾಡ

western ghat ಶರಾವತಿ ಪಂಪ್ಡ ಸ್ಟೋರೇಜ್​ ಯೋಜನೆ ಬೇಡ

ಪ್ರಮುಖ ಮುಖ್ಯಾಂಶಗಳು

  • ಅನುಮತಿ ನೀಡಿದರೆ ಕೋರ್ಟ್​ ಮೊರೆ
  • ಪಶ್ಚಿಮ ಘಟ್ಟ ಉಳಿಸಿ ಅಭಿಯಾನ
ಹುಬ್ಬಳ್ಳಿ: western ghat ಪಶ್ಚಿಮ ಘಟ್ಟದ ನದಿ ಕಣಿವೆಗಳ ಸಂರಕ್ಷಣೆಗೆ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಘೋಷಿಸಬೇಕು, ಶರಾವತಿ ಕಣಿವೆಯಲ್ಲಿ ಪಂಪ್ಡ ಸ್ಟೋರೇಜ್​ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಜನಾಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ವನ್ಯಜಿವಿ ಮಂಡಳಿಯ ತಜ್ಞರ ಸಮಿತಿ ಶರಾವತಿ ಪಂಪ್ಡ ಸ್ಟೋರೇಜ್​ ಯೋಜನೆ ಸ್ಥಳ ಸಮೀಕ್ಷೆ ನಡೆಸಿ ನೀಡಿರುವ ಶಿಫಾರಸು ಜಾರಿ ಮಾಡಬೇಕು. ಬೇಡ್ತಿ ಅಘನಾಶಿನಿ ನದಿ ತಿರುವು ಯೋಜನೆಗಳು ಪಶ್ಚಿಮ ಘಟ್ಟಕ್ಕೆ ಮಾರಕ. ನೀರಿಲ್ಲದ ಬೇಡ್ತಿ ವರದಾ ಯೋಜನೆಯ ಡಿಪಿಆರ್​ ತಯಾರಿಕೆಗೆ ತಡೆ ನೀಡಬೇಕು ಎಂದು ಆಗ್ರಹಿಸಿದರು.
ನದಿ ತಿರುವು ಯೋಜನೆಗಳಿಂದ ಪಶ್ಚಿಮ ಘಟ್ಟದಲ್ಲಿ ಒಂದು ಲಕ್ಷ ಎಕರೆ ಅರಣ್ಯ ನಾಶವಾಗಲಿದೆ. ಭಾರಿ ಭೂಕುಸಿತಗಳು ಸಂಭವಿಸಲಿವೆ. ಲಕ್ಷ ರೈತರು, ಮೀನುಗಾರರು ನಿರಾಶ್ರಿತರಾಗಲಿದ್ದಾರೆ. ಇದಲ್ಲದೇ ಲಕ್ಷಾಂತರ ಜೀವರಾಶಿಗಳು ಅಳಿಸಿ ಹೋಗಲಿವೆ.
ಅಳಿವಿನಂಚಿನಲ್ಲಿರುವ ಸಿಂಗಳಿಕ ಸಂತತಿಗೆ ಧಕ್ಕೆ ಬರಲಿದೆ ಎಂದು ಹೇಳಿದರು.
ಕೈಗಾ ಯೋಜನೆ ಜಾರಿಯಾದ ನಂತರ ಯಲ್ಲಾಪುರ ಭಾಗದಲ್ಲಿ ಕ್ಯಾನ್ಸರ್​ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲೆಗೆ ಬೇಡದ ಇಂತಹ ಅನೇಕ ಯೋಜನೆಗಳನ್ನು ತರಲಾಗಿದೆ. ಜಿಲ್ಲೆಯ ಧಾರಣ ಶಕ್ತಿ ಮುಗಿದು ಹೋಗಿದೆ ಎಂದು ಅನೇಕ ತಜ್ಞರು ವರದಿ ನೀಡಿದಾಗ್ಯೂ ಹೊಸ ಯೋಜನೆಗಳನ್ನು ಸರ್ಕಾರ ತರಲು ಹೊರಟಿರುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ವನ್ಯ ಜೀವಿ ಕಾನೂನು ತಜ್ಞ ಗಿರಿಧರ ಕುಲಕರ್ಣಿ ಮಾತನಾಡಿ, ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶವಾಗಿದೆ. ಅಂತಹ ಅರಣ್ಯ ಎಲ್ಲಿಯೂ ಇಲ್ಲ. ಇಂತಹ ವಿರಳ ಕಾಡು ಉಳಿಸಿಕೊಳ್ಳಬೇಕೆಂಬ ಕಾನೂನುಗಳೇ ಇವೆ. ಹೀಗಿರುವಾಗ ಶರಾವತಿ ಪಂಪ್ಡ ಸ್ಟೋರೇಜ್​ ಯೋಜನೆಗೆ ಸರ್ಕಾರಗಳು ಅನುಮತಿ ನೀಡಿದರೆ ಅನಿವಾರ್ಯವಾಗಿ ಕೋರ್ಟ್​ ಮೊರೆ ಹೋಗಬೇಕಾಗುತ್ತದೆ ಎಂದರು.
ಪರ್ಯಾವರಣ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ, ಪಶ್ಚಿಮ ಘಟ್ಟದ ಸರ್ವನಾಶಕ್ಕೆ ರಾಜ್ಯ ಸರ್ಕಾರ ಪಣ ತೊಟ್ಟಂತೆ ಕಾಣುತ್ತಿದೆ. ರಾಜಕಾರಣಿಗಳು ವಿಜ್ಞಾನಿಗಳಿಗಿಂತ ಬುದ್ಧಿವಂತರು ಎಂದುಕೊಂಡಿದ್ದಾರೆ. ಅರಣ್ಯ ನಾಶ ಮಾಡಬಾರದು ಎಂದು ಎಷ್ಟೇ ಹೇಳಿದರೂ ಅದರ ವಿರುದ್ಧವಾಗಿ ಕೆಲಸ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.