ಬಾಲವಿಕಾಸ ಅಕಾಡೆಮಿಯ ಸುಸಜ್ಜಿತ ಸ್ಟುಡಿಯೋ 
ಧಾರವಾಡ

ಬಾಲವಿಕಾಸ ಅಕಾಡೆಮಿಯಲ್ಲಿ ಸುಸಜ್ಜಿತ ಸ್ಟುಡಿಯೋ

ಮಂಜುನಾಥ ಅಂಗಡಿ
ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಕೇಂದ್ರ ಕಚೇರಿ ಧಾರವಾಡದಲ್ಲಿದ್ದು, ಬಹುದಿನಗಳ ಬೇಡಿಕೆಯೊಂದು ಈಡೇರಿದೆ. ಕೇಂದ್ರ ಕಚೇರಿಯ ಕಟ್ಟಡದಲ್ಲಿ ಸುಸಜ್ಜಿತ ಸ್ಟುಡಿಯೋ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಉದ್ಘಾಟನೆಗೆ ಸಜ್ಜುಗೊಂಡಿದೆ.
ಸುಮಾರು 20 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸುಸಜ್ಜಿತ ಇದಾಗಿದೆ. ಜಿಲ್ಲಾಽಕಾರಿ ದಿವ್ಯ ಪ್ರಭು ಅವರು ಮಕ್ಕಳ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾದರಿಯಾಗುವಂಥ ಸ್ಟುಡಿಯೋ ನಿರ್ಮಿಸಲು ಸಲಹೆ ನೀಡಿದ್ದರು. ಅದಕ್ಕೆ ಸ್ಪಂದಿಸಿದ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಅಗತ್ಯ ಅನುದಾನ ತಂದು ಸ್ಟುಡಿಯೋ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಟುಡಿಯೋದಲ್ಲಿ ಇಬ್ಬರು ಕುಳಿತುಕೊಳ್ಳಬಹುದಾದ ಕುರ್ಚಿ ವ್ಯವಸ್ಥೆ ಇದ್ದು, ಸಂದರ್ಶನಕ್ಕೆ ಸೂಕ್ತವಾಗಿದೆ. ಕುರ್ಚಿಗಳನ್ನು ತೆಗೆದು ವೇದಿಕೆಯನ್ನಾಗಿಯೂ ಬಳಸಿಕೊಳ್ಳಬಹುದು. 8- 10 ಮಕ್ಕಳು ನೃತ್ಯ, ಸಮೂಹ ಗಾಯನ, ಇತರ ಸ್ಪರ್ಧಾ ಚಟುವಟಿಕೆಗಳಿಗೂ ಇದು ಬಳಕೆಯಾಗಲಿದೆ. ಸ್ಟುಡಿಯೋ ಸಂಪೂರ್ಣ ಧ್ವನಿನಿರೋಧಕವಾಗಿದ್ದು, ಕಾರ್ಯಕ್ರಮಗಳ ರೆಕಾರ್ಡಿಂಗ್‌ಗೆ ಸೂಕ್ತವಾಗಿದೆ. ರೆಕಾರ್ಡಿಂಗ್‌ಗೆ ಪೂರಕವಾಗುವಂಥ ಅತ್ಯಾಧುನಿಕ ಕ್ಯಾಮರಾ, ಮೈಕ್, ಎಡಿಟಿಂಗ್ ಸಿಸ್ಟಂ ಅಳವಡಿಸಲಾಗಿದೆ.
ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ `ಮಿಷನ್ ವಿದ್ಯಾಕಾಶಿ' ಅನುಷ್ಠಾನಗೊಳಿಸಿದೆ. ಕಳೆದ ಸಾಲಿನಲ್ಲಿ ಫಲಿತಾಂಶದಲ್ಲಿ ಏರಿಕೆಯಾಗದಿದ್ದರೂ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣದಲ್ಲಿ ಪ್ರಗತಿಯಾಗಿತ್ತು. ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿರುವ ಸ್ಟುಡಿಯೋ `ಮಿಷನ್ ವಿದ್ಯಾಕಾಶಿ' ಯೋಜನೆಗೂ ಪೂರಕವಾಗಲಿದೆ. ಶೈಕ್ಷಣಿಕ ಚಟುವಟಿಕೆಗಳಿಗಾಗಿ ಬಳಸಿಕೊಳ್ಳಲು ಅಕಾಡೆಮಿ ನಿರ್ದೇಶಕರು ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯ ರಾಜ್ಯದ ಎಲ್ಲ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ.
ಸ್ಟುಡಿಯೋದಲ್ಲಿ ನಾಡಿನ ಸಂಪನ್ಮೂಲ ವ್ಯಕ್ತಿಗಳು, ವಿಷಯ ತಜ್ಞರನ್ನು ಕರೆಸಿ ಮಕ್ಕಳ ಶೈಕ್ಷಣಿಕ ಪಠ್ಯ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ವಿಡಿಯೋ ಲಿಂಕ್‌ಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸುವ ಯೋಜನೆ ಇದೆ. ಈ ಮೂಲಕ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
"

ಅಕಾಡೆಮಿಯಲ್ಲಿ ನಿರ್ಮಿಸಿದ ಸುಸಜ್ಜಿತ ಸ್ಟುಡಿಯೋಕ್ಕೆ ಶಿಕ್ಷಣ ತಜ್ಞರು, ವಿಷಯ ತಜ್ಞರನ್ನು ಕರೆಸಿ ಪಠ್ಯಪೂರಕ ಮಾಹಿತಿಯನ್ನ ರೆಕಾರ್ಡಿಂಗ್ ಮಾಡಬಹುದಾಗಿದೆ. ಅದರ ಲಿಂಕ್ ಅನ್ನು ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ಏಕಕಾಲಕ್ಕೆ ತಲುಪಿಸಬಹುದಾಗಿದೆ. ಜತೆಗೆ ಸಾಧಕ ಹಾಗೂ ಪ್ರತಿಭಾವಂತ ಮಕ್ಕಳ ಪ್ರತಿಭೆಯನ್ನು ರಾಜ್ಯಾದ್ಯಂತ ಪರಿಚಯಿಸಲು ಇದು ನೆರವಾಗಲಿದೆ.

— ಸಂಗಮೇಶ ಬಬಲೇಶ್ವರ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ