ಶ್ರೀ ಸತ್ಯಾತ್ಮತೀರ್ಥರು 
ಧಾರವಾಡ

ಭಗವಂತನ ಆಧೀನರು ನಾವು. ನಮ್ಮಲ್ಲಿ ಸಾರಾಸಾರ ವಿವೇಕ ಇರಬೇಕು

ಧಾರವಾಡ: 'ಭಗವಂತನ ಒಂದೊಂದು ಗುಣಗಳೂ ವಿಶ್ವಕ್ಕೆ ಕಾರಣವಾದದ್ದು. ಅಪರಿಪಕ್ವ ಮನಸ್ಸಿರುವ ವ್ಯಕ್ತಿಯ ಮನಸ್ಸು ಏರಳಿತವಾಗಿರುತ್ತದೆ. ಮನಸ್ಸನ್ನು ಪಕ್ವ ಮಾಡಿಕೊಂಡಿರುವವನಿಗೆ, ಸಿಹಿ ಕಹಿಗಳನ್ನು ಸಮನಾಗಿ ಕಂಡಿರುವವನಿಗೆ ಮನಸ್ಸು ಪಕ್ವವಾಗಿರುತ್ತದೆ. ಯಾವುದೇ ವಿಕಾರವಾಗುವುದಿಲ್ಲ. ಇದನ್ನು ನಾವು ಭಗವಂತನಿಂದ ಕಲಿಯಬೇಕಾಗಿದೆ. ನಾವೆಲ್ಲರೂ ಆತನ ಆಧೀನರು. ಸುಖ ಬಂದಾಗ ಹೇಗೋ ಹಾಗೆಯೇ ಬಂದ ದುಃಖ ಸಹ ಅಷ್ಟೇ ಸರಳವಾಗಿ ಹೋಗುತ್ತದೆ ಎನ್ನುವ ಧೃಡ ನಂಬಿಕೆಯನ್ನು ನಾವು ಹೊಂದಬೇಕು. ದುಃಖ ಬಂದಾಗ ನಿರಾಶೆಯ ಸ್ಥಿತಿಗೆ ಹೋಗಬಾರದು.
ಎಲ್ಲರನ್ನೂ ಉದ್ಧಾರ ಮಾಡುವ ಸಾಮರ್ಥ್ಯ ಉಳ್ಳ ಭಗವಂತನನ್ನು ನಂಬಬೇಕು. ವೃದ್ಧರ ಸೇವೆ ಮಾಡಬೇಕು.'ಎಂದು ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರು ಹೇಳಿದರು.
ಧಾರವಾಡ ಉತ್ತರಾದಿ ಮಠದ ನೂತನ ಕಟ್ಟಡ ಆವರಣದಲ್ಲಿ 31ನೇ ಚಾತುರ್ಮಾಸ್ಯವನ್ನು ಕೈಗೊಂಡಿರುವ ಉತ್ತರಾದಿಮಠದ ಶ್ರೀಪಾದಂಗಳಾದ ಶ್ರೀ ಸತ್ಯಾತ್ಮತೀರ್ಥರು ಆರನೆಯ ದಿನದ ಆಶೀರ್ವಚನ ಸಂದೇಶದಲ್ಲಿ ಮೇಲಿನಂತೆ ತಿಳಿಸಿದರು.
ಮುಂದುವರೆದು ಅವರು 'ದೇವರು ರಕ್ಷಣೆ ಮಾಡುತ್ತಾನೆ. ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ನಮಗಿರಬೇಕು. ಏನೇ ಕಷ್ಟದ ಪ್ರಸಂಗ ಬಂದರೂ ಒಳ್ಳೆಯ ದಿನಗಳು ಬಂದೇ ಬರುತ್ತವೆ ಎನ್ನುವ ವಿಶ್ವಾಸ ನಮ್ಮಲ್ಲಿ ಬೆಳೆಯಬೇಕು. ಆತ್ಮಹತ್ಯೆ ಎನ್ನುವುದು ಅತ್ಯಂತ ಪಾಪ. ಅದಕ್ಕೆ ಬಲಿಯಾಗಬಾರದು. ಒಳ್ಳೆಯ ಕ್ಷಣಗಳು ಬಂದೇ ಬರುತ್ತವೆ. ಕೇವಲ ಭೋಗಕ್ಕಾಗಿ ಈ ದೇಹ ಇಲ್ಲ. ಈ ದೇಹ ಬರೀ ಅಲಂಕಾರಕ್ಕಾಗಿ ಇಲ್ಲ. ಇದು ದೇವರು ಕೊಟ್ಟ ದೇಹ, ನಶ್ವರ ಎನ್ನುವ ಎಚ್ಚರ ಇರಬೇಕು.
'ಈ ದೇಹ ಸಾಧನೆಗಾಗಿ ಇದೆ ಎನ್ನುವ ಬಲವಾದ ನಂಬಿಕೆ, ವಿಶ್ವಾಸ ನಮ್ಮಲ್ಲಿ ಇರಬೇಕು. ಅಧರ್ಮ ಮಾಡುವುದು ನಮ್ಮ ಜೀವನವಾಗಬಾರದು. ತಾಳ್ಮೆ, ಸಮಾಧಾನದಿಂದ ಬದುಕಬೇಕು. ರೋಗಿಗಳು ವೈದ್ಯರ ಹತ್ತಿರ ಬಂದಾಗ ,ಅವರು ಹೇಳಿದ ಪ್ರಕಾರ ನಡೆದುಕೊಂಡರೆ, ಅವರ ಮಾತಿಗೆಯೇ ಅರ್ಧ ರೋಗ ಗುಣವಾಗುತ್ತದೆ. ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕು. ತಪ್ಪಿದಲ್ಲಿ, ಸರಿಯಾದ ರೀತಿಯಲ್ಲಿ ನಡಯದೆ ಹೋದರೆ ಭಗವಂತ ನಿಷ್ಠರವಾಗುತ್ತಾನೆ. ಶಿಕ್ಷೆಯನ್ನೂ ಕೊಡುತ್ತಾನೆ. ಆ ಎಚ್ಚರ ನಮಗಿರಬೇಕು. ಸಂಯಮ ಅನ್ನುವುದು ಬಹಳ ಮುಖ್ಯ. ಕೆಟ್ಟದನ್ನು ಯೋಚಿಸಬಾರದು. ಕೆಟ್ಟದನ್ನು ಮಾಡಬಾರದು. ನಮಗೆ ಹಿತವಾದುದನ್ನೇ ಭಗವಂತ ಕೊಡುತ್ತಾನೆ. ನಾವು ಸದಾ ಆತನಿಗೆ ಕೃತಜ್ಞರಾಗಿರಬೇಕು ಎಂದು ಶ್ರೀ ಸತ್ಯಾತ್ಮತೀರ್ಥ ಸ್ವಾಮಿಗಳು ಹೇಳಿದರು.