ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ
ಧಾರವಾಡ: ಕಳೆದ ಆರು ತಿಂಗಳಿಂದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯಿಂದ ವಾಹನಗಳ ನೋಂದಣಿ ಪ್ರಮಾಣ ಪತ್ರ (ಆರ್‌ಸಿ ಕಾರ್ಡ್) ಸಕಾಲಕ್ಕೆ ಲಭ್ಯವಾಗುತ್ತಿಲ್ಲ. ಇದರ ಪರಿಣಾಮ ನೂತನ ವಾಹನ ಖರೀದಿಸಿದವರು ಕಾರ್ಡ್‌ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.
ಇದರಿಂದ ಅಧಿಕೃತ ದಾಖಲೆ ಇಲ್ಲದೆ ಸಂಚರಿಸುವುದು ಹೇಗೆ ಎಂಬ ಪ್ರಶ್ನೆ ವಾಹನ ಮಾಲೀಕ
ರನ್ನು ಕಾಡುತ್ತಿದೆ. ಸಾಫ್ಟ್ ವೇರ್ ಅಪ್ಲೇಟ್ ಸೇರಿ ಇಲಾಖೆಯಲ್ಲಿನ ತಾಂತ್ರಿಕ ಗೊಂದಲ ಹಾಗೂ ಬೆಂಗಳೂರಿನಿಂದಲೇ ಆರ್‌ಸಿ ಕಾರ್ಡ್ ವಿತರಿ ಸುವ ಕಾರಣ ವಾಹನ ಖರೀದಿಸಿ ದವರಿಗೆ ಆರ್‌ಸಿ ಕಾರ್ಡ್ ವಿಳಂಬವಾಗಿ ಕೈ ಸೇರುತ್ತಿವೆ.
ಜಿಲ್ಲೆಯಲ್ಲಿ ಹೊಸ ವಾಹನ ಖರೀದಿಸುವವರ ಸಂಖ್ಯೆ ನಿತ್ಯವೂ ಹೆಚ್ಚುತ್ತಲೇ ಇದೆ. ದ್ವಿಚಕ್ರ, ತ್ರಿಚಕ್ರ ವಾಹನ, ಕಾರುಗಳು, ವಾಣಿಜ್ಯ ಬಳಕೆ ವಾಹನಗಳ ಖರೀದಿ ಮತ್ತು ನೋಂದಣಿ ಹೆಚ್ಚಾಗುತ್ತಿದೆ. ವಾಹನಗಳ ಖರೀದಿ ಬಳಿಕ ಮಾಲೀಕರು ಮೋಟಾರು ವಾಹನ ಕಾಯ್ದೆ ಪ್ರಕಾರ ಅಧಿಕೃತವಾಗಿ ನೋಂದಣಿ ಪ್ರಮಾಣಪತ್ರ ಪಡೆಯಬೇಕು. ವಾಹನದಲ್ಲಿ ಸಂಚರಿಸುವ ವೇಳೆ ಸಂಚಾರ ಪೊಲೀಸರು ಕೇಳಿದರೆ ಆರ್‌ಸಿ ಕಾರ್ಡ್, ಚಾಲನಾ ಪರವಾನಗಿ ತೋರಿಸಬೇಕಾಗುತ್ತದೆ. ಆದರೆ, 6 ತಿಂಗಳಿಂದ ಆರ್‌ಸಿ ಕಾರ್ಡ್ ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ.
ಹೊಸ ವಾಹನ ಖರೀದಿಸಿದರೂ ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಆರ್‌ಸಿ ಇಲ್ಲದೆ ವಾಹನ ಚಲಾಯಿಸುವಾಗ ಕೆಲವರು ದಂಡ ಕಟ್ಟಿದ ಉದಾಹರಣೆಗಳೂ ಇವೆ. ಶೋರೂಮ್ ಮಾಲೀಕರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ ಅಲೆದಾಡುವಂತಾಗಿದೆ.
ಹುಬ್ಬಳ್ಳಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಕೆಎ-63) ಕಚೇರಿ ವ್ಯಾಪ್ತಿಯಲ್ಲಿ 1,308 ಆರ್‌ಸಿ ಕಾರ್ಡ್‌ಗಳ ವಿತರಣೆ ಬಾಕಿ ಇದೆ. ಧಾರವಾಡ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ-25) ವ್ಯಾಪ್ತಿಯಲ್ಲಿ 783 ಕಾರ್ಡ್‌ಗಳು ಬಾಕಿ ಇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಇನ್ನೂ 10 ಸಾವಿರಕ್ಕೂ ಅಧಿಕ ಆರ್‌ಸಿ ಕಾರ್ಡ್‌ಗಳ ವಿತರಣೆ ವಿಳಂಬವಾಗಿದೆ ಎಂದು ಕೆಲ ಶೋರೂಮ್ ಮಾಲೀಕರು ಹೇಳುತ್ತಿದ್ದಾರೆ.
ತಿದ್ದುಪಡಿ, ವಿಳಾಸ ಬದಲಾವಣೆಯೂ ವಿಳಂಬ:
ವಿಳಾಸ ಬದಲಾವಣೆ. ಆರ್‌ಸಿ ಕಾರ್ಡ್ ಗಳಲ್ಲಿನ ತಿದ್ದುಪಡಿ, ಸೆಕೆಂಡ್ ಹ್ಯಾಂಡ್ ವಾಹನಗಳ ಆರ್‌ಸಿ ಕಾರ್ಡ್ಗಳು ವಾಹನ ಮಾಲೀಕರಿಗೆ ತಲುಪುವುದು ವಿಳಂಬವಾಗುತ್ತಿದೆ. ಅಸಲಿಗೆ ಸಾರಿಗೆ ಇಲಾಖೆ ಬಳಸುವ ಲಕೋಟೆಯು ವಿಶಿಷ್ಟವಾಗಿದ್ದು, ಅವುಗಳ ಸರಬರಾಜು ಇಲ್ಲದಿರುವುದು ವಿಳಂಬಕ್ಕೆ ಕಾರಣವಾಗಿದೆ.
783 ಆರ್‌ಸಿ ಕಾರ್ಡ್‌ಗಳ ವಿತರಣೆ ಬಾಕಿ ಇದೆ. ಎಚ್‌ಎಸ್ ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಯಾಗದಿರುವ ವಾಹನಗಳಿಗೆ ಆರ್‌ಸಿ ಕಾರ್ಡ್ ವಿತರಣೆಯಾಗಿಲ್ಲ. ಬಾಕಿ ಉಳಿದ ಆರ್‌ಸಿ ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಧಾರವಾಡ ಪ್ರಾದೇಶಿಕ ಸಾರಿಗೆ ಕಚೇರಿ ಉಪ ಆಯುಕ್ತ ಎಂದು ಶ್ರೀಧರ ಮಲ್ಲಾಡ ಪ್ರತಿಕ್ರಿಯಿಸಿದ್ದಾರೆ.