Vip party ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ವಿಕಾಸಶೀಲ್ ಇನ್ಸಾನ್ ಪಕ್ಷದ ರಾಜ್ಯಾಧ್ಯಕ್ಷ ಬಿ.ಕೆ. ಮೋಹನಕುಮಾರ, ಮಠಾಧೀಶರಾದ ಶ್ರೀ ಆದಿಕಾಯಕಯೋಗಿ ಸ್ವಾಮೀಜಿ, ಶ್ರೀ ರಾಘವೇಂದ್ರ ಗುರೂಜಿ, ಶ್ರೀ ಷಡಕ್ಷರಿ ಸ್ವಾಮೀಜಿ, ಶ್ರೀ ರಾಜು ಗುರೂಜಿ, ಶ್ರೀ ವರಲಿಂಗೇಶ್ವರ ಸ್ವಾಮೀಜಿ, ಶ್ರೀಕೊಟ್ಟೂರೇಶ್ವರ ಸ್ವಾಮೀಜಿ, ಇದ್ದರು.
- ಬೆಂಗಳೂರಿನಲ್ಲಿ ಜೂನ್ 7ರಂದು ಉದ್ಘಾಟನೆ
- ರಾಜ್ಯಾಧ್ಯಕ್ಷ ಮೋಹನಕುಮಾರ ಹೇಳಿಕೆ
ಹುಬ್ಬಳ್ಳಿ: vip party ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕ ಕಳೆದರೂ ಅನೇಕ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಪಾಲು ಪಡೆದುಕೊಳ್ಳುವ ಸಲುವಾಗಿ ರಾಷ್ಟ್ರೀಯ ವಿಕಾಸಶೀಲ್ ಇನ್ಸಾನ್ ಪಕ್ಷವನ್ನು ಕರ್ನಾಟಕಕ್ಕೆ ತರಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ಕೆ. ಮೋಹನಕುಮಾರ ತಿಳಿಸಿದರು.
ನಗರದ ಡೆನಿಸನ್ಸ್ ಹೋಟೆಲ್ನಲ್ಲಿ ಶನಿವಾರ ರಾಷ್ಟ್ರೀಯ ಕೋಲಿ ಬೆಸ್ತ್ ನಿಶಾದ್ ಹಿಂದುಳಿದ ವರ್ಗಗಳ ಮಠಾಧೀಶ್ವರರ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಕೃಪಾಶೀರ್ವಾದ ಮಹಾಸಭೆ ಮೊದಲು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 70 ಲಕ್ಷ ಬೆಸ್ತರು ಸೇರಿದಂತೆ ಅತ್ಯಂತ ಹಿಂದುಳಿದವರು 1.5 ಕೋಟಿ ಜನರಿದ್ದಾರೆ. ಶೋಷಿತರ ಧ್ವನಿಯಾಗಿ ನಿಲ್ಲುವ ಉದ್ದೇಶದಿಂದ ಪಕ್ಷ ಸ್ಥಾಪನೆ ಮಾಡಲಾಗಿದೆ. ಕೇವಲ ಮತ ನೀಡಲು ನಮ್ಮನ್ನು ಬಳಸಿಕೊಳ್ಳಲಾಗಿದೆ. ಮೈಸೂರಿನಲ್ಲಿಯೂ ಸ್ವಾಮೀಜಿಗಳ ಕೃಪಾಶೀರ್ವಾದ ಸಭೆ ನಡೆಸಿ ಜೂನ್ 7ರಂದು ಬೆಂಗಳೂರಿನಲ್ಲಿ ಪಕ್ಷದ ಅಧಿಕೃತ ಉದ್ಘಾಟನೆ ಮಾಡಲಾಗುವುದು ಎಂದರು.
ರಾಷ್ಟ್ರೀಯ ಅಧ್ಯಕ್ಷ ಮುಖೇಶ ಸಹನಿ ಪಕ್ಷ ಸಂಘಟನೆ ಮಾಡಿ ಯಶಸ್ವಿಯಾಗಿದ್ದಾರೆ. ಇದನ್ನು ರಾಜ್ಯದಲ್ಲಿ ವಿಸ್ತರಿಸಲಾಗುವುದು. ರಾಜ್ಯದಲ್ಲಿ ಕನಿಷ್ಠ 40 ವಿಧಾನಸಭಾ ಕ್ಷೇತ್ರ ಗೆಲ್ಲುವ ಶಕ್ತಿ ಹಿಂದುಳಿದ ವರ್ಗಗಳಿಗೆ ಇದೆ. ಇಷ್ಟು ಸೀಟು ಯಾವುದೇ ಪಕ್ಷ ನಮಗೆ ಬಿಟ್ಟು ಕೊಟ್ಟರೆ ಅವರಿಗೆ ಬೆಂಬಲ ನೀಡಲು ಸಿದ್ಧ. ಇಲ್ಲದಿದ್ದರೆ ಸ್ವತಂತ್ರವಾಗಿ ಪಕ್ಷ ಚುನಾವಣೆ ಎದುರಿಸಲಿದೆ ಎಂದು ಉತ್ತರಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎ.ಎಚ್. ಮಾತನಾಡಿ, ಪಕ್ಷ ಉದ್ಘಾಟನೆ ಪೂರ್ವದಲ್ಲಿ ಎರಡನೇ ಸಭೆ ಇದಾಗಿದೆ. ರಾಜ್ಯದಲ್ಲಿ ಚಿಕ್ಕ ಸಮುದಾಯಗಳ ಸಮಸ್ಯೆ ಕೇಳುವವರಿಲ್ಲ, ಕೇವಲ ಬಲಿಷ್ಠರಿಗೆ ಟಿಕೆಟ್ ಕೊಡುತ್ತ ಬರಲಾಗಿದೆ. ಬೆಸ್ತ್, ಉಪ್ಪಾರ, ಮಡಿವಾಳ ಸೇರಿ 195 ಜಾತಿಗಳು ಇದುವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇವರಿಗೆ ರಾಜಕೀಯ ಪ್ರಾತಿನಿಧ್ಯ ಸಿಗಬೇಕು. ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುವ ಸಮಾರಂಭದಲ್ಲಿ 150ಕ್ಕೂ ಹೆಚ್ಚು ಸ್ವಾಮೀಜಿಗಳು ಆಶೀರ್ವಾದ ಮಾಡಲಿದ್ದಾರೆ ಎಂದರು.