ಹುಬ್ಬಳ್ಳಿಯ ವಿದ್ಯಾನಿಕೇತನ (vidyaniketana) ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಲೇಜಿನ 18 ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಲಾಯಿತು. 
ಧಾರವಾಡ

(vidyaniketana) ವಿದ್ಯಾನಿಕೇತನ ಕಾಲೇಜ್‌ನಿಂದ ಗುಣಮಟ್ಟದ ಶಿಕ್ಷಣ

ಹುಬ್ಬಳ್ಳಿ: ಹುಬ್ಬಳ್ಳಿಯ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ (vidyaniketana) ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾಲೇಜಿನ 18 ನೇ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರ ಏರ್ಪಡಿಸಲಾಗಿತ್ತು.
ಹು-ಧಾ ಮಹಾನಗರ ಪಾಲಿಕೆ ಉಪ ಆಯುಕ್ತ ಅರವಿಂದ ಜಮಖಂಡಿ ಉದ್ಘಾಟಿಸಿ ಮಾತನಾಡಿ, ವಿದ್ಯಾನಿಕೇತನ ಕಾಲೇಜ್ ಸಮಾಜಕ್ಕೆ ಒಳ್ಳೆಯ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಪಾಲಕರ ಕನಸನ್ನು ನನಸು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಗುರಿ ಮುಟ್ಟುವ ತವಕವನ್ನು ಸೃಷ್ಟಿಸುತ್ತಿದೆ ಎಂದು ಬಣ್ಣಿಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಪ ನಿರ್ದೇಶಕಿ ಡಾ. ತೇಜಶ್ವಿನಿ ನಾರಾಯಣಕರ ಮಾತನಾಡಿ, ಜೀವನ ಮೌಲ್ಯ, ಸಮಾಜಮುಖಿ ಕೆಲಸಗಳನ್ನು ನಿಷ್ಠೆಯಿಂದ ಮಾಡಬೇಕು. ಪರೀಕ್ಷೆಗಳಿಗೆ ಭಯಪಡುವ ಅಗತ್ಯವಿಲ್ಲ. ಸತತ ಪ್ರಯತ್ನ ಹಾಗೂ ಏಕಾಗ್ರತೆ ಇದ್ದರೆ ವಿದ್ಯಾರ್ಥಿಗಳು ನಿಗದಿತ ಗುರಿ ಮುಟ್ಟಲು ಸಾಧ್ಯ ಎಂದರು.
ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಠಿಣ ಪರಿಶ್ರಮವೇ ಗೆಲುವಿಗೆ ದಾರಿ ಎಂದು ಹೇಳಿದರು.
ಇದೇ ವೇಳೆ ಪ್ರೊ. ಅನಿಲಕುಮಾರ ಚೌಗಲೆ ಕುರಿತು ಬರೆದ ‘ಗೆಳೆಯನ ಗೆಲುವು’ 51 ಕವನಗಳ ಗುಚ್ಛವನ್ನು ಬಿಡುಗಡೆ ಮಾಡಲಾಯಿತು. ಕೃತಿಕಾರ ಪ್ರೊ. ಪ್ರಕಾಶ ಚೌಗಲೆ, ಪ್ರೊ. ಅನಿಲಕುಮಾರ ಚೌಗಲೆ ಅವರ ಕುರಿತು ಹೊಗಳಿದರು.
ಪ್ರಾಚಾರ್ಯ ಡಾ. ಆನಂದ ಮುಳಗುಂದ ಅಧ್ಯಕ್ಷತೆ ವಹಿಸಿ ಕಾಲೇಜಿನ ವಾರ್ಷಿಕ ವರದಿ ಓದಿದರು.
2024-25ನೇ ಸಲಿನ ವಾರ್ಷಿಕ ಪರೀಕ್ಷೆ, ಐಐಟಿ, ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಒಂಭತ್ತು ವಿದ್ಯಾರ್ಥಿಗಳಿಗೆ ತಲಾ ಒಂದೊಂದು ಲಕ್ಷ ರೂಪಾಯಿ ಬಹುಮಾನ ನೀಡಿ ಗೌರವಿಸಲಾಯಿತು.
ವೀರೇಂದ್ರ ಛೇಡ್ಡಾ ದಂಪತಿ, ಡಾ. ರಮೇಶ ಭಂಡಿವಾಡ ಇತರರು ಉಪಸ್ಥಿತರಿದ್ದರು.
ಪ್ರೊ. ಗಂಗಾಧರ ಕಮಡೊಳ್ಳಿ ಸ್ವಾಗತಿಸಿದರು. ಪ್ರೊ. ಶ್ರೀದೇವಿ ಅನಿಲಕುಮಾರ ಚೌಗಲೆ ವಂದಿಸಿದರು.