ಸುದ್ದಿಗೋಷ್ಠಿಯಲ್ಲಿ (video release) ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿಮಠ, ಸದಾನಂದ ಡಂಗನವರ, ಅಲ್ತಫ್ ಹಳ್ಳೂರ ಇದ್ದಾರೆ.
ಹುಬ್ಬಳ್ಳಿ: ಹಲ್ಲೆ ಪ್ರಕರಣದ (video release)ಆರೋಪಿ, ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿತು.
ಸುಜಾತಾ ಹಂಡಿ ಕೈಯಲ್ಲಿ ಮಚ್ಚು, ಲೆದರ್ ಬೆಲ್ಟ್ ಹಿಡಿದು ಪುರುಷನ ಮೇಲೆ ದೌರ್ಜನ್ಯ ನಡೆಸುತ್ತಿರುವುದು 5 ನಿಮಿಷಗಳ ವಿಡಿಯೋದಲ್ಲಿ ದಾಖಲಾಗಿದೆ. ಇದೇ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ನಡೆದುಕೊಂಡಿರುವ ಇನ್ನೆರಡು ವಿಡಿಯೋಗಳು ಬಳಿಕ ಹರಿದಾಡಿದವು.
ಬೆಳಗ್ಗೆ ವಿಡಿಯೋ ಬಿಡುಗಡೆಗೊಳಿಸುವ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಜತ ಉಳ್ಳಾಗಡ್ಡಿಮಠ, ಹಲ್ಲೆ ಪ್ರಕರಣದ ಆರೋಪಿ ಸುಜಾತಾ ಹಂಡಿ ಬಂಧನದ ವೇಳೆ ಪೊಲೀಸ್ರು ವಿವಸ್ತ್ರಗೊಳಿಸಿದ್ದಾರೆಂಬುದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅವರ ಟೂಲ್ ಕಿಟ್ ಆಗಿದೆ. ಅವರು ಹುಬ್ಬಳ್ಳಿಯ ಶಾಂತಿ ಭಂಗ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ವ್ಯಕ್ತಿ ಯಾರೂ ಎಂಬುದು ನಮಗೆ ಗೊತ್ತಿಲ್ಲ. ಎಷ್ಟು ವರ್ಷಗಳ ಹಿಂದಿನದು ಎಂಬುದು ನನಗೆ ತಿಳಿದಿಲ್ಲ. ನಮ್ಮ ಕೈ ಸೇರಿದ ವಿಡಿಯೋ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತಿದ್ದೇವೆ. ಈ ವಿಡಿಯೋದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ವ್ಯಕ್ತಿಗೆ ನ್ಯಾಯ ಸಿಗಬೇಕು. ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ದೌರ್ಜನ್ಯ ನಡೆಸಿರುವ ಇನ್ನು ಹಲವು ವಿಡಿಯೋಗಳು ಇರಬಹುದು ಎಂದರು.
ಕೇಶ್ವಾಪುರ ಚಾಲುಕ್ಯನಗರದಲ್ಲಿ ಜ. 5ರಂದು ವೋಟರ್ಸ್ ಮ್ಯಾಪಿಂಗ್ ಪ್ರಕ್ರಿಯೆ ವೇಳೆ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಸುಜಾತಾ ಹಂಡಿ ಅವರ ಮನೆಗೆ ತೆರಳಿ ಶಾಸಕ ಮಹೇಶ ಟೆಂಗಿನಕಾಯಿ ಸಭೆ ನಡೆಸುತ್ತಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಆಭಯ ನೀಡುತ್ತಾರೆ. ಸುಜಾತಾ ಹಂಡಿ ತಾನಾಗಿಯೇ ಬಟ್ಟೆ ಕಳಚಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರೂ, ಅಲ್ಲಿಯವರೆಗೆ ಪೊಲೀಸ್ರು ಸುಮ್ಮನೆ ಇದ್ದಿದ್ದು ಯಾಕೆ ಎಂಬುದು ಮಹೇಶ ಟೆಂಗಿನಕಾಯಿ ಪ್ರಶ್ನೆ ಮಾಡುತ್ತಾರೆ. ಇಂಥ ರಾಕ್ಷಸಿ ಪ್ರವೃತ್ತಿಯ ಜನರನ್ನು ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಇದೀಗ ಇಂಥವಳನ್ನು ಇಟ್ಟುಕೊಂಡು ಹುಬ್ಬಳ್ಳಿಯ ಶಾಂತಿ ಭಂಗ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗುರುನಾಥ ಉಳ್ಳಿಕಾಶಿ, ಬಸವರಾಜ ಬೆಣಕಲ್ ಇದ್ದರು.