vegg market ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಳಿಗೆಗಳ ಮುಂದೆ ಇಡಲಾಗಿರುವ ಮಾರಾಟವಾಗದ ತರಕಾರಿ.
- ಹೋಟೆಲ್ಗಳು ಬಂದ್, ಇನ್ನೊಂದೆಡೆ ಅಕಾಲಿಕ ಮಳೆ ಕಾಟ
- ಹೋಲ್ಸೇಲ್ ದರದಲ್ಲಿ ಎಪಿಎಂಸಿಯಿಂದಲೇ ಖರೀದಿ
ಹುಬ್ಬಳ್ಳಿ: vegg market ಒಂದೆಡೆ ಅಕಾಲಿಕ ಜಡಿ ಮಳೆ, ಆಲಿಕಲ್ಲು ಮಳೆಗಳು ಜಮೀನಿನಲ್ಲಿರುವ ಫಸಲಿಗೆ ಮಾರಕವಾಗಿ ಪರಿಣಮಿಸಿದ್ದರೆ, ಇನ್ನೊಂದೆಡೆ ಅಡುಗೆ ಅನಿಲ ಸಿಗದೇ ಹೋಟೆಲ್ಗಳು ಬಂದ್ ಆಗಿ ರೈತರು ಬೆಳೆದ ತರಕಾರಿ ಮಾರಾಟವಾಗದೇ ಉಳಿಯುತ್ತಿದೆ.
ಹುಬ್ಬಳ್ಳಿಯ ಎಪಿಎಂಸಿಯು ಉತ್ತರ ಕರ್ನಾಟಕದ ಬಹುದೊಡ್ಡ ತರಕಾರಿ ಮಾರುಕಟ್ಟೆಯಾಗಿದೆ. ಇಲ್ಲಿಗೆ ನಿತ್ಯ ನೂರಾರು ಲೋಡ್ ತರಕಾರಿ ಬರುತ್ತದೆ.
ಧಾರವಾಡ ಮಾತ್ರವಲ್ಲ, ಅಕ್ಕಪಕ್ಕದ ಗದಗ, ಹಾವೇರಿ, ಕೊಪ್ಪಳ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯಿಂದಲೂ ಕಾಯಿಪಲ್ಯ ಮಾರಾಟ ಮಾಡಲು ರೈತರು ಬರುತ್ತಾರೆ. ಹಾಗಾಗಿ ತರಕಾರಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ.
ಅನೇಕ ಹೋಟೆಲ್ ನವರು ತರಕಾರಿಯನ್ನೂ ಹೋಲ್ಸೇಲ್ ದರದಲ್ಲಿ ಎಪಿಎಂಸಿಯಿಂದಲೇ ಖರೀದಿ ಮಾಡುತ್ತಾರೆ. ಆದರೆ, ಕಳೆದೊಂದು ವಾರದಿಂದ ಸಿಲಿಂಡರ್ ಸಿಗದೇ ಅನೇಕ ಹೋಟೆಲ್ಗಳ ಬಾಗಿಲು ಬಂದ್ ಆಗಿವೆ. ಇದರಿಂದ ತರಕಾರಿ ವ್ಯಾಪಾರ ಕುಂಟುತ್ತ ಸಾಗಿದೆ.
ಎಪಿಎಂಸಿಯ ಹೋಲ್ಸೇಲ್ ಮಾರುಕಟ್ಟೆಯಲ್ಲಿ ತರಕಾರಿಯು ಮಾರಾಟವಾಗದೇ ಹಾಗೇ ಉಳಿಯುತ್ತಿದೆ. ಅನೇಕ ಮಳಿಗೆಗಳ ಮುಂದೆ ಉಳಿದ ಕಾಯಿಪಲ್ಯವನ್ನು ಸ್ಟಾಕ್ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಮಾನ್ಯ ದಿನಗಳಲ್ಲಿ ಎಪಿಎಂಸಿಗೆ ನಿತ್ಯ 30 ಸಾವಿರ ಕ್ವಿಂಟಾಲ್ನಷ್ಟು ತರಕಾರಿ ಆವಕವಾಗುತ್ತದೆ. ಇದರಲ್ಲಿ ಅರ್ಧದಷ್ಟೂ ಈಗ ಖಾಲಿಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಹಾಗೆಂದು ದರ ಇಳಿಕೆಯಾಗಿಲ್ಲ. ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆಲೆ ಇಳಿದಿದೆ. ಮೊದಲೆಲ್ಲ ಕೆಜಿಗೆ 80ರೂ. ಆಸುಪಾಸು ಇದ್ದ ತರಕಾರಿ, ಈಗ 50-60 ರೂ. ಗೆ ಇಳಿದಿದೆ.
ಬದನೆಕಾಯಿ, ಹಿರೇಕಾಯಿ, ಸೌತೆಕಾಯಿ, ಡೊಣ್ಣಮೆಣಸಿನಕಾಯಿ ಹೀಗೆ ಬಹುತೇಕ ಎಲ್ಲ ತರಕಾರಿಯು ಮಾರಾಟವಾಗದೇ ಉಳಿಯುತ್ತಿದೆ. ಸೊಪ್ಪಿನ ಪಲ್ಯವೂ ಉಳಿಯುತ್ತಿದ್ದು, ಬಿಸಿಲಿಗೆ ಬೇಗ ಬಾಡಿ ಹೋಗುತ್ತಿದೆ. ಇದೆಲ್ಲದರ ದುಷ್ಪರಿಣಾಮವನ್ನು ರೈತರು ಎದುರಿಸಬೇಕಾಗಿದೆ.