ವಾರ ಆಚರಣೆ ಅಂಗವಾಗಿ ಉಪ್ಪಿನಬೆಟಗೇರಿ ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ದ್ಯಾಮವ್ವ-ದುರ್ಗವ್ವ ದೇವಸ್ಥಾನದಲ್ಲಿ ಉಭಯ ದೇವಿಯರಿಗೆ ಮಂಗಳವಾರ ಉಡಿ ತುಂಬಿದ ನಂತರ ಕುಮಾರ ವಿರೂಪಾಕ್ಷ ಸ್ವಾಮೀಜಿ ಹಾಗೂ ಮೃತ್ಯುಂಜಯ ಯರಗಂಬಳಿಮಠ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಮಲ್ಲಣ್ಣ ಅಷ್ಟಗಿ, ಶಿವಪ್ಪ ವಿಜಾಪೂರ, ಮಲ್ಲಯ್ಯ ಮಠಪತಿ, ಮಂಜುನಾಥ ಬೆಳವಡಿ ಇತರರಿದ್ದರು. 
ಧಾರವಾಡ

goddesses ದ್ಯಾಮವ್ವ-ದುರ್ಗವ್ವ ದೇವಿಯರಿಗೆ ಉಡಿ ವಾರ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಉಪ್ಪಿನಬೆಟಗೇರಿಯಲ್ಲಿ ಭಂಡಾರ ಎರಚಿ ಸಂಭ್ರಮ
  • ಅಂಬಲಿ, ಕಿಚಡಿ ನೈವೇದ್ಯ ಅರ್ಪಣೆ
ಉಪ್ಪಿನಬೆಟಗೇರಿ: ಗ್ರಾಮದ ದ್ಯಾಮವ್ವ-ದುರ್ಗವ್ವ ದೇವಿಯರಿಗೆ ಮಂಗಳವಾರ ಒಂದು ದಿನ ವಾರ ಆಚರಣೆ ಮಾಡುವ ಮೂಲಕ ಉಭಯ ದೇವಿಯರಿಗೆ ಉಡಿ ತುಂಬಿ ವಾರ ಸಂಪನ್ನ ಮಾಡಲಾಯಿತು.
ವಾರ ಆಚರಣೆ ಅಂಗವಾಗಿ ಮಂಗಳವಾರ ಮುಂಜಾನೆ ಉಭಯ ದೇವಿಯರನ್ನು ಸುಂದರವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಭಕ್ತರು ತುಂಬಿದ ಕೊಡಗಳಲ್ಲಿ ಬೇವಿನ ಸೊಪ್ಪಿನೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ್ದರು. ನಂತರ ಡೊಳ್ಳಿನ ವಾದ್ಯದೊಂದಿಗೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ತೆರಳಿ ಪಾದಗಟ್ಟೆಗಳಿಗೆ ನೀರು ಹಾಕಿ ದೀಪಗಳನ್ನು ಹಚ್ಚಿ ಭಕ್ತಿಯಿಂದ ನಮಿಸಿದರು.
ನಂತರ ಮಾರ್ಕೆಟ್ ರಸ್ತೆಯ ಜಗದ್ಗುರು ಮೂರುಸಾವಿರ ವಿರಕ್ತಮಠಕ್ಕೆ ಡೊಳ್ಳಿನ ವಾದ್ಯದೊಂದಿಗೆ ತೆರಳಿ ಕುಮಾರ ವಿರೂಪಾಕ್ಷ ಸ್ವಾಮೀಜಿಗಳನ್ನು ದೇವಸ್ಥಾನಕ್ಕೆ ಕರೆ ತಂದರು.
ನಂತರ ಸ್ಥಳೀಯ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹಾಗೂ ಹನುಮನಕೊಪ್ಪ ಗ್ರಾಮದ ವೇ.ಮೂ. ಮೃತ್ಯುಂಜಯ ಯರಗಂಬಳಿಮಠ ಅವರ ದಿವ್ಯ ಸಾನ್ನಿಧ್ಯದಲ್ಲಿ ಉಭಯ ದೇವಿಯರಿಗೆ ಉಡಿ ತುಂಬಲಾಯಿತು. ಹನುಮನಕೊಪ್ಪ ಹಾಗೂ ಉಪ್ಪಿನಬೆಟಗೇರಿ ಗ್ರಾಮಸ್ಥರು ಪರಸ್ಪರ ಭಂಡಾರ ಎರಚುತ್ತ ದ್ಯಾಮವ್ವ-ದುರ್ಗವ್ವ ನಿನ್ನಾಲ್ಕ್ ಉಧೋ...ಉಧೋ..ಉಧೋ ಎನ್ನುತ್ತ ಸೀರೆ, ಕುಪ್ಪುಸ, ಹಸಿರು ಬಳೆ, ಎಲೆ, ಅಡಿಕೆ, ಉತ್ತತ್ತಿ, ಬಾಳೆಹಣ್ಣು, ನೆನೆಗಡಲೆ, ಎಲ್ಲವನ್ನು ತೆಗೆದುಕೊಂಡು ದೇವಿ ದೇವಸ್ಥಾನಕ್ಕೆ ತೆರಳಿ ಉಡಿ ತುಂಬಿ ಭಕ್ತಿಪೂರ್ವಕವಾಗಿ ನಮಿಸಿದರು.
ವಾರ ಆಚರಣೆ ನಿಮಿತ್ತ ಮಂಗಳವಾರ ದೇವಿಯರಿಗೆ ಪ್ರಿಯವಾದ ಜೋಳದಿಂದ ವಿಶೇಷವಾಗಿ ತಯಾರಿಸಿದ ಜೋಳದ ಕಿಚಡಿ ಹಾಗೂ ಅಂಬಲಿ ಮಾಡಿ ದೇವಿಯರಿಗೆ ನೈವೇದ್ಯ ಮಾಡಲಾಯಿತು. ನಂತರ ಪ್ರಸಾದ ರೂಪದಲ್ಲಿ ಭಕ್ತರೆಲ್ಲರಿಗೂ ವಿತರಿಸಲಾಯಿತು.
ಮಂಜುನಾಥ ಸಂಕಣ್ಣವರ, ಮಲ್ಲಣ್ಣ ಅಷ್ಟಗಿ, ಶಿವಪ್ಪ ವಿಜಾಪೂರ, ರಾಮಲಿಂಗಪ್ಪ ನವಲಗುಂದ, ಅಶೋಕ ಮಸೂತಿ, ವೀರಣ್ಣಪರಾಂಡೆ, ಕಲ್ಲಪ್ಪ ಪುಡಕಲಕಟ್ಟಿ, ಬಸವರಾಜ ಬೆಳವಡಿ, ಸಾತಲಿಂಗ ಬೀಡಿ, ಆನಂದ ಬಡಿಗೇರ, ಶಂಕರ ಯಲಿಗಾರ, ಈಶ್ವರ ಬೀಡಿ, ಶಂಕರ ಪೂಜಾರ, ಬಸವರಾಜ ಮಸೂತಿ, ಉಮೇಶ ಬೀಡಿ, ಮಡಿವಾಳಪ್ಪ ಹೊಸೂರ, ಗಂಗಪ್ಪ ತಳವಾರ, ನಾಗರಾಜ ಹಳೇಮನಿ ಸೇರಿದಂತೆ ಹನುಮನಕೊಪ್ಪ, ಉಪ್ಪಿನಬೆಟಗೇರಿ, ಹನುಮನಾಳ ಗ್ರಾಮಸ್ಥರು ಪಾಲ್ಗೊಂಡಿದ್ದರು.