Winter 
ಧಾರವಾಡ

ಥಂಡಿಗೆ ಅವಳಿ ನಗರ ಥಂಡಾ!

ಜಗದೀಶ ಹೊಂಬಳಿ

ಪ್ರಮುಖ ಮುಖ್ಯಾಂಶಗಳು

  • ವಾಡಿಕೆಗಿಂತ 1-2 ಡಿಗ್ರಿ ತಾಪಮಾನ ಕುಸಿತ
  • ಮುಂದಿನ ಒಂದು ವಾರ ಕನಿಷ್ಠ ತಾಪಮಾನ ಮುಂದುವರಿಕೆ
  • ಡಿಸೆಂಬರ್, ಜನವರಿ ತಿಂಗಳೂ ಇದೇ ರೀತಿಯ ಕನಿಷ್ಠ ತಾಪಮಾನ ಮುಂದುವರಿಯಲಿದೆ
ಧಾರವಾಡ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಡಿತ್ವಾಹ ಚಂಡುಮಾರುತ ಉದ್ಭವಾದ ಪರಿಣಾಮ ಕರಾವಳಿ ಮತ್ತು ದಕ್ಷಿಣದ ಒಳನಾಡಿನಲ್ಲಿ ಮಳೆ ಆಗುತ್ತಿದೆ. ಆ ಕಡೆಯ ಗಾಳಿ ಉತ್ತರದ ಕಡೆ ಚಲಿಸಿದ್ದರಿಂದ ಧಾರವಾಡ ಜಿಲ್ಲೆಯಲ್ಲಿಯೂ ಕಳೆದ 2-3 ದಿನಗಳಿಂದ ಚಳಿಗಾಲದ ವಾಡಿಕೆಯ ಕನಿಷ್ಠ ತಾಪಮಾನಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕುಸಿದಿದೆ.
ಇದರ ಪರಿಣಾಮ ಜಿಲ್ಲೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಮೈ ಕೊರೆಯುವ ಚಳಿ ಆವರಿಸಿದೆ. ಧಾರವಾಡ ಜಿಲ್ಲೆಯಲ್ಲೂ ಬೆಳಗ್ಗೆ, ಸಂಜೆ ಮೈ ಕೊರೆಯುವಂಥ ಚಳಿ ಬಿಡುತ್ತಿದೆ. ಡಿಸೆಂಬರ್ ಮತ್ತು ಜನವರಿ ತಿಂಗಳೂ ಇದೇ ರೀತಿಯ ಕನಿಷ್ಠ ತಾಪಮಾನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಽಕಾರಿಗಳು ತಿಳಿಸಿದ್ದಾರೆ.
ಚಳಿಗಾಲದಲ್ಲಿ ಕನಿಷ್ಠ ತಾಪಮಾನ ಸಾಮಾನ್ಯವಾಗಿ 15 ಡಿಗ್ರಿ ಸೆಲ್ಸಿಯಸ್ ಆಸುಪಾಸು ಇರುತ್ತದೆ. ನ.29ರಂದು ಶನಿವಾರ ರಾಜ್ಯದ ಬೀದರಲ್ಲಿ 12.3 ಡಿಗ್ರಿ ಸೆಲ್ಸಿಯಸ್ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ಕಲಬುರ್ಗಿಯಲ್ಲಿ 12.6, ವಿಜಯಪುರದಲ್ಲಿ 13.4, ಬೆಳಗಾವಿ, ಬಾಗಲಕೋಟೆಯಲ್ಲಿ 14.4 ಡಿಗ್ರಿ ಸೆಲ್ಸಿಯಸ್, ಧಾರವಾಡ 14.6, ಕೊಪ್ಪಳ 14.8, ವಿಜಯಪುರ 13.4, ಯಾದಗಿರಿಯಲ್ಲಿ 14.7 ಕನಿಷ್ಠ ತಾಪಮಾನ ದಾಖಲಾಗಿದೆ. ಮುಂದಿನ ಐದು ದಿನಗಳಲ್ಲಿ ಬೆಳಗಾವಿ, ಬೀದರನಲ್ಲಿ 11 ಡಿಗ್ರಿ, ಕಲಬುರ್ಗಿ 12, ಬಾಗಲಕೋಟೆ, ಧಾರವಾಡ, ಹಾವೇರಿಯಲ್ಲಿ 13, ಗದಗ ಜಿಲ್ಲೆಯಲ್ಲಿ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಲಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗ್ರಾಮೀಣ ಕೃಷಿ ಮೌಸಮ್ ಸೇವಾ ಕೇಂದ್ರದ ಅಽಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ಕಳಕಳಿ:
ಚಳಿಗಾಲದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನೆಗಡಿ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ.
ಶೀತದಿಂದ ದೇಹವನ್ನು ರಕ್ಷಿಸಿಕೊಳ್ಳಲು ಉಣ್ಣೆಯ ಬಟ್ಟೆಗಳು, ಸ್ವೆಟರ್‌ಗಳು, ಶಾಲುಗಳು ಮತ್ತು ಸಾಕ್ಸ್ ಗಳನ್ನು ಧರಿಸಬೇಕು.
ತಣ್ಣೀರು ಕುಡಿಯುವುದನ್ನು ತಪ್ಪಿಸಿ, ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಉತ್ತಮ.
ಬೆಲ್ಲ, ತುಪ್ಪ, ಡ್ರೆ ಫ್ರುಟ್ಸ್, ನಾರಿನಾಂಶವಿರುವ ತರಕಾರಿ, ದೇಹಕ್ಕೆ ಶಾಖ ನೀಡುವ ಆಹಾರ ಸೇವಿಸುವುದು ಒಳ್ಳೆಯದು.
ಚಳಿಗಾಲದಲ್ಲಿ ತ್ವಚೆ ಒಣಗಿ ಬಿರುಕು ಬಿಡಬಹುದು. ಆದ್ದರಿಂದ, ಚರ್ಮಕ್ಕೆ ತೇವಾಂಶ ನೀಡುವ ಮಾಯಿಶ್ಚರ, ಲಿಪ್ ಬಾಮï‌ಗಳನ್ನು ಬಳಸುವುದು ಮುಖ್ಯ.
ದೈಹಿಕವಾಗಿ ಸಕ್ರಿಯವಾಗಿರುವುದು ಮತ್ತು ಯೋಗಾಸನಗಳನ್ನು ಮಾಡುವುದರಿಂದ ದೇಹದ ಉಷ್ಣತೆ ಮತ್ತು ರೋಗನಿರೋಧಕ ಶಕ್ತಿ ಕಾಪಾಡಿಕೊಳ್ಳಬಹುದು.
ಚಳಿಗಾಲದಲ್ಲಿ ಮನೆಯ ಒಳಗೆ ಹೆಚ್ಚು ಸಮಯ ಕಳೆಯುವುದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಬಹುದು. ಆದ್ದರಿಂದ ಹೊರಗಡೆ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಲು ಮರೆಯಬೇಡಿ.