ಏಕತಾ ನಡಿಗೆಯ ಪೋಸ್ಟರ್ ಅನ್ನು ಮೇಯರ್ ಜ್ಯೋತಿ ಪಾಟೀಲ ಹುಬ್ಬಳ್ಳಿಯಲ್ಲಿ ಗುರುವಾರ ಬಿಡುಗಡೆಗೊಳಿಸಿದರು. ಉಪ ಮೇಯರ್ ಸಂತೋಷ ಚವ್ಹಾಣ, ಮೇರಾ ಯುವಾ ಭಾರತ್ ಸಂಯೋಜಕ ಗೌತಮ ರೆಡ್ಡಿ ಇದ್ದರು. 
ಧಾರವಾಡ

ಹುಬ್ಬಳ್ಳಿಯಲ್ಲಿ (Unity walk) ಏಕತಾ ನಡಿಗೆ ನಾಳೆ

ಸಂತೋಷ ವೈದ್ಯ

ಪ್ರಮುಖ ಮುಖ್ಯಾಂಶಗಳು

  • ಮೇಯರ್ ಜ್ಯೋತಿ ಪಾಟೀಲ ಹೇಳಿಕೆ
  • ವಿಕಸಿತ ಭಾರತ ಪಾದಯಾತ್ರೆ’
  • ಸಚಿವ ಪ್ರಲ್ಹಾದ ಜೋಶಿ ಚಾಲನೆ
ಹುಬ್ಬಳ್ಳಿ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಮೇರಾ ಯುವಾ ಭಾರತ್, ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಎನ್​ಎಸ್​ಎಸ್ ಘಟಕ ಹಾಗೂ ಹು-ಧಾ ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ನ.15 ರಂದು ನಗರದಲ್ಲಿ ಏಕತಾ ನಡಿಗೆ ಆಯೋಜಿಸಲಾಗಿದೆ ಎಂದು ಮೇಯರ್ ಜ್ಯೋತಿ ಪಾಟೀಲ ತಿಳಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 8 ಗಂಟೆಗೆ ವಿದ್ಯಾನಗರ ಬಿವಿಬಿ ಕಾಲೇಜ್​ನಿಂದ ಆರಂಭಗೊಳ್ಳುವ ನಡಿಗೆ ತೋಳನಕೆರೆವರೆಗೆ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡುವರು. ಯುವ ಜನತೆ, ಗಣ್ಯರು, ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಪಾಲ್ಗೊಳ್ಳುವರು.
ಕೇಂದ್ರ ಸರ್ಕಾರದ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ ‘ವಿಕಸಿತ ಭಾರತ ಪಾದಯಾತ್ರೆ’ ರಾಷ್ಟ್ರೀಯ ಅಭಿಯಾನ ಕೈಗೊಂಡಿದೆ. ಯುವಕರಲ್ಲಿ ರಾಷ್ಟ್ರಪ್ರೇಮ ಉತ್ತೇಜಿಸುವುದು, ನಾಗರಿಕ ಜವಾಬ್ದಾರಿ ಬಿತ್ತುವುದು ಹಾಗೂ ಏಕತೆಯನ್ನು ಬಲಪಡಿಸುವ ಇದರ ಉದ್ದೇಶವಾಗಿದೆ. ದೇಶನ್ನು ಏಕತೆಯ ಸೂತ್ರದಲ್ಲಿ ಒಂದುಗೂಡಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಅಮೋಘ ನಾಯಕತ್ವಕ್ಕೆ ಗೌರವ ಸಲ್ಲಿಸುವುದು ಧ್ಯೇಯವಾಗಿದೆ ಎಂದು ತಿಳಿಸಿದರು.
ಅಕ್ಟೋಬರ್ 31ರಿಂದ ಆರಂಭಗೊಂಡಿರುವ ಜಿಲ್ಲಾ ಮಟ್ಟದ ಪಾದಯಾತ್ರೆ (ಏಕತಾ ನಡಿಗೆ)ಗಳು ನ. 25ರ ವರೆಗೆ ಸಂಸದರ ಕ್ಷೇತ್ರದ ಎಲ್ಲ ಜಿಲ್ಲೆಗಳಲ್ಲಿ ನಡೆಯಲಿದೆ. ಪಾದಯಾತ್ರೆಗೂ ಮುನ್ನ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ರಾಷ್ಟ್ರೀಯ ಸೇವಾ ಯೋಜನೆ ಕೋಶವು ವಿವಿಧ ಕಾಲೇಜುಗಳಲ್ಲಿ ಜಾಗೃತಿ, ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮೇರಾ ಯುವಾ ಭಾರತ್ ಸಂಯೋಜಕ ಗೌತಮ ರೆಡ್ಡಿ ಇದ್ದರು.