ಹುಬ್ಬಳ್ಳಿ: ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಿದ್ದರೂ ಅದಕ್ಕೆ ಕಾಲಮಿತಿ ಇರುವುದೇ ಇಲ್ಲ... ಸ್ಥಳಿಯರಲ್ಲಿ ಇಂತಹ ಅಭಿಪ್ರಾಯ ಇನ್ನಷ್ಟು ಗಟ್ಟಿಯಾಗುವಂತಿದೆ ಮಹಾನಗರ ಪಾಲಿಕೆ ಕೈಗೊಂಡಿರುವ ಕೆಲಸ ಕಾರ್ಯಗಳು. ರಸ್ತೆ, ಗಟಾರು ದುರಸ್ತಿ, ನಾಲಾ ಸ್ವಚ್ಛತೆ ಕಾರ್ಯಗಳು ಬಹಳಷ್ಟು ನಿಧಾನ ಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಬದುಕು ದುಸ್ತರ ಮಾಡಿವೆ.
ಇಲ್ಲಿಯ ಮಹಾವೀರ ಗಲ್ಲಿ, ಕಮರಿಪೇಟ, ತುಳಜಾಭವಾನಿ ಸರ್ಕಲ್ ಹೀಗೆ ಅನೇಕ ಕಡೆಗಳಲ್ಲಿ ನಾಲಾ ಮೇಲಿನ ಕಟ್ಟಡ ಹಾಗೂ ಸ್ಲ್ಯಾಬ್ ತೆಗೆದು ಹಾಕಿ ತಿಂಗಳುಗಳೇ ಕಳೆದಿವೆ. ದುರಸ್ತಿ ಮಾಡಿ ಅದರ ಮೇಲೆ ಸ್ಲ್ಯಾಬ್ ಅಥವಾ ಮುಚ್ಚಳಿಕೆ ಹಾಕುವ ಕೆಲಸ ಆಗದಿರುವುದು ಅಪಾಯಕ್ಕೆ ಮುನ್ಸೂಚನೆ ನೀಡುವಂತಿದೆ.
ಮಹಾವೀರ ಗಲ್ಲಿಯಿಂದ ಕಮರಿಪೇಟೆಗೆ ಹೋಗುವ ಸರ್ಕಲ್ನಲ್ಲಿ ಮೂರ್ನಾಲ್ಕು ತಿಂಗಳಿಂದ ನಾಲಾ ಮೇಲಿನ ಸ್ಲ್ಯಾಬ್ ತೆಗೆಯಲಾಗಿದೆ. ಅಲ್ಲಿ ಸುತ್ತಲೂ ಬ್ಯಾರಿಕೇಡ್ ಹಾಕಿ ಸಂಚಾರ ನಿರ್ಬಂಧಿಸಲಾಗಿದೆ.
ಇದರಿಂದ ತುಳಜಾಭವಾನಿ ಸರ್ಕಲ್ಗೆ ಬರುವವರು, ಮಾರ್ಕೆಟ್ಗೆ ಹೋಗುವವರು ಸುತ್ತುವರಿದು ಬರಬೇಕಾಗಿದೆ. ಜನರಿಗೆ ಅನಗತ್ಯ ಓಡಾಟ ಕಾಯಂ ಆಗಿದೆ.
ಇನ್ನು ಕಮರಿಪೇಟ ಪೊಲೀಸ್ ಠಾಣೆ ಇದ್ದ ಜಾಗದಲ್ಲಿಯೂ ನಾಲಾ ಮುಕ್ತವಾಗಿ ಹರಿಯುತ್ತಿದೆ. ಠಾಣೆ ಕಟ್ಟಡ ತೆರವು ಮಾಡಿ ಎರಡು- ಮೂರು ವರ್ಷವಾಗುತ್ತ ಬಂದಿದೆ. ಅಕ್ಕಪಕ್ಕದ ಕಟ್ಟಡಗಳು ಅರ್ಧಂರ್ಬಧ ಕೆಡವಲಾಗಿದ್ದು, ಅವಶೇಷಗಳು ಅಲ್ಲಿಯೇ ಇವೆ. ಇದು ನಗರದ ಸೌಂದರ್ಯವನ್ನೂ ಹಾಳು ಮಾಡುವಂತಿದೆ.
ಹೂಳು ತುಂಬಿದೆ ನಾಲಾ: ತುಳಜಾಭವಾನಿ ಸರ್ಕಲ್ ಬಳಿಯಿಂದ ನಾಲಾ ಹೂಳು ತುಂಬಿಕೊಂಡಿದೆ. ಒಂದಿಷ್ಟು ಜೋರು ಮಳೆ ಸುರಿಯುತ್ತಿದ್ದಂತೆ ರಸ್ತೆಯಲ್ಲಿ ಕೊಳಚೆ ಹರಿಯುತ್ತದೆ. ಬಹಳಷ್ಟು ಸಾರಿ ಕೊಳಚೆಯು ಅಕ್ಕಪಕ್ಕದ ಅಂಗಡಿ, ಮುಂಗಟ್ಟುಗಳಿಗೆ ನುಗ್ಗಿದ ಪ್ರಸಂಗಗಳು ನಡೆದಿವೆ.
ಅಂಗಡಿಗಳಲ್ಲಿನ ಕಸ, ಪ್ಯಾಕಿಂಗ್ ಮಾಡಿದ ಥರ್ಮಾಕೋಲ್, ಕಟ್ಟಿಗೆ, ಪ್ಲಾಸ್ಟಿಕ್ ಸೇರಿದ ಅನೇಕ ವೇಸ್ಟ್ಗಳನ್ನು ಸುರಿಯಲಾಗುತ್ತದೆ. ಅಲ್ಲದೇ ನಾಲಾ ಹರಿಯುವ ಮಾರ್ಗದಗುಂಟ ಹೊತ್ತು ತರುವ ಕಸ ಇಲ್ಲಿ ಸಿಕ್ಕಿ ಹಾಕಿಕೊಂಡು ಅವಾಂತರಗಳನ್ನು ಸೃಷ್ಟಿಸುತ್ತದೆ. ವರ್ಷಗಳಿಂದ ನಾಲಾ ಸ್ವಚ್ಛ ಮಾಡದೇ ಇರುವುದರಿಂದ ಹೂಳು ಹಾಗೇ ಇದೆ. ಇದೀಗ ನಾಲಾ ಸ್ವಚ್ಛ ಮಾಡಿಯೇ ಸ್ಲ್ಯಾಬ್ ಹಾಕಬೇಕಾಗಿದೆ.
ಗಬ್ಬು ವಾಸನೆ: ಪ್ರಮುಖ ಮಾರುಕಟ್ಟೆ ಪ್ರದೇಶವಾಗಿರುವುದರಿಂದ ಇಲ್ಲಿನ ನಾಲಾ ಮುಕ್ತವಾಗಿ ಹರಿಯುತ್ತಿರುವುದು ಅನಾರೋಗ್ಯಕರ ವಾತಾವರಣ ಸೃಷ್ಟಿಸಿದೆ. ಗಬ್ಬು ವಾಸನೆ ಆವರಿಸುತ್ತಿದೆ. ಅಲ್ಲದೇ ಟ್ರಾಫಿಕ್ ಕಿರಿಕಿರಿಗೂ ಕಾರಣವಾಗಿದೆ. ಮಕ್ಕಳು, ಹಿರಿಯರು, ಮಹಿಳೆಯರು ಸೇರಿ ಪಾದಚಾರಿಗಳು ಅಪಾಯಕಾರಿ ಸ್ಥಳದಲ್ಲಿ ಓಡಾಡಬೇಕಿದೆ.
ನಗರದಲ್ಲಿ ನಡೆಯುವ ಅನೇಕ ಕಾಮಗಾರಿಗಳಿಗೆ ಕಾಲಮಿತಿ ಎಂಬುದೇ ಇಲ್ಲ. ಕೂಡಲೇ ಗಟಾರು, ನಾಲಾ ಸ್ವಚ್ಛ ಮಾಡಿ ಸ್ಲ್ಯಾಬ್ ಹಾಕಿ ವಾಹನ ಹಾಗೂ ಜನ ಸಂಚಾರಕ್ಕೆ ಮುಕ್ತ ಮಾಡಬೇಕು ಎಂಬುದು ಜನರ ಬೇಡಿಕೆಯಾಗಿದೆ.
ಮಹಾವೀರ ಗಲ್ಲಿ, ಕಮರಿಪೇಟ ರಸ್ತೆ ಸರ್ಕಲ್ ಹಾಗೂ ಇತರೆಡೆ ನಾಲಾ ಸ್ಲ್ಯಾಬ್ ಪುನರ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ವರ್ಕ್ ಆರ್ಡರ್ ಕೊಡಲಾಗುವುದು. ನಾಲಾ ಸ್ವಚ್ಛತೆ ನಂತರವೇ ಕಾಂಕ್ರಿಟ್ ಹಾಕಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ವಲಯ ಕಚೇರಿ ಸಹಾಯಕ ಆಯುಕ್ತ ಆನಂದ ಕೆಸರಗೊಪ್ಪ ಹೇಳುತ್ತಾರೆ.