ಹುಬ್ಬಳ್ಳಿಯ ಗಬ್ಬೂರ ಕ್ರಾಸ್​ ಬಳಿ ನಿರ್ಮಾಣವಾಗಿರುವ ಕೆಎಲ್​ಇ ಸಂಸ್ಥೆಯ ಜೆಜಿಎಂಎಂ ವೈದ್ಯಕಿಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ (transgender clinic) ಸಂಪೂರ್ಣ ಒಪಿಡಿ ವಿಭಾಗವನ್ನು ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಉದ್ಘಾಟಿಸಿದರು. ಡಾ. ಎಚ್​.ಎಚ್​. ಕುಕನೂರ, ಡಾ. ಶಾರದಾ ಮೆಟಗುಡ್​, ರಾಜರತ್ನ ಹರಿಗಲ್​, ಡಾ. ವಿ.ಎಸ್​. ಸಾಧುನವರ, ಡಾ. ವಿ.ಡಿ. ಪಾಟೀಲ, ಡಾ. ಎಂ.ಜಿ. ಹಿರೇಮಠ, ಇತರರು ಇದ್ದರು. 
ಧಾರವಾಡ

ತೃತೀಯ (transgender clinic) ಲಿಂಗಿಗಳಿಗೆ ಒಪಿಡಿ ಆರಂಭ

ಪ್ರಮುಖ ಮುಖ್ಯಾಂಶಗಳು

  • ಕೆಎಲ್​ಇ ಜೆಜಿಎಂಎಂ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನ
  • ಮೊದಲ ಸಮಗ್ರ ಸಮುದಾಯ ಆರೋಗ್ಯ ಚಿಕಿತ್ಸಾಲಯ
  • ತೃತೀಯ ಲಿಂಗಿಗಳ ಆರೋಗ್ಯ ಕಾಳಜಿ
ಹುಬ್ಬಳ್ಳಿ: ಕೆಎಲ್​ಇ ಆಸ್ಪತ್ರೆಯ ಮೂಲಕ ಇದೇ ಮೊದಲ ಬಾರಿ (transgender clinic) ತೃತಿಯ ಲಿಂಗಿಗಳ ಆರೋಗ್ಯ ರಕ್ಷಣೆಗೆ ವಿಶೇಷ ಗಮನ ಹರಿಸಿ ಸಂಪೂರ್ಣ ಎಂಬ ಒಪಿಡಿ ಪ್ರಾರಂಭಿಸಲಾಗಿದೆ ಎಂದು ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು.
ಇಲ್ಲಿಯ ಗಬ್ಬೂರ ಕ್ರಾಸ್​ ಬಳಿ ಕೆಎಲ್​ಇ ಸಂಸ್ಥೆಯ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಮೂರುಸಾವಿರಮಠ ವೈದ್ಯಕಿಯ ಕಾಲೇಜು (ಜೆಜಿಎಂಎಂಎಂಸಿ) ವತಿಯಿಂದ ಸಂಪೂರ್ಣ (ಸೊಸೈಟಿ ಅಫರ್ಮಿಟಿವ್ ಮಾಡೆಲ್​ ಫಾರ್ ಪ್ರಮೋಷನ್​, ಅಪ್​ಲಿಫ್ಟ್​ಮೆಂಟ್​, ರಿಹ್ಯಾಬಿಲಿಟೇಶನ್​ ಹಾಗೂ ನೆಟ್ ವರ್ಕಿಂಗ್ -ಟ್ರಾನ್ಸ್​ಜೆಂಡರ್​ ಕ್ಲಿನಿಕ್​) ಸಮುದಾಯ ವೈದ್ಯಕಿಯ ಒಪಿಡಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇದು ಕರ್ನಾಟಕದ ಖಾಸಗಿ ವೈದ್ಯಕಿಯ ಕಾಲೇಜು ಸ್ಥಾಪಿಸಿದ ಮೊದಲ ಸಮಗ್ರ ಸಮುದಾಯ ಆರೋಗ್ಯ ಚಿಕಿತ್ಸಾಲಯವಾಗಿದೆ. ಕೆಎಲ್​ಇ ಸಂಸ್ಥೆಯ ಚೇರ್ಮನ್​ ಡಾ. ಪ್ರಭಾಕರ ಕೋರೆ ಅವರ ದೂರದೃಷ್ಟಿಯ ಫಲ ಇದಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ತಿರಸ್ಕಾರ ಮನೋಭಾವ ಸರಿಯಲ್ಲ. ಅವರೂ ಕೂಡ ಸಮಾಜದ ಭಾಗವಾಗಿದ್ದಾರೆ. ಅವರ ಆರೋಗ್ಯ ಸಮಸ್ಯೆಗಳಿಗೆ ಕೆಎಲ್​ಇ ಸ್ಪಂದಿಸಿದೆ. ಈ ವ್ಯವಸ್ಥೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸಮರಾ ಸೊಸೈಟಿ ನಿರ್ದೇಶಕಿ ರಾಜರತ್ನಾ ಹರಿಗಲ್​ ಮಾತನಾಡಿ, ಕುಟುಂಬ ಹಾಗೂ ಸಮಾಜದಿಂದ ತಿರಸ್ಕರಿಸಲ್ಪಟ್ಟ ತೃತೀಯ ಲಿಂಗಿಗಳ ಆರೋಗ್ಯ ಕಾಳಜಿ ಮಾಡುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಎಷ್ಟೋ ಸಂದರ್ಭದಲ್ಲಿ ವೈದ್ಯರು ತೃತೀಯ ಲಿಂಗಿಗಳಿಗೆ ಚಿಕಿತ್ಸೆ ಕೊಡಲು ಹಿಂದೇಟು ಹಾಕುತ್ತಾರೆ. ಕೆಎಲ್​ಇ ಆಸ್ಪತ್ರೆಯಲ್ಲಿ ಟ್ರಾನ್ಸ್​ಜೆಂಡರ್​ ಕ್ಲಿನಿಕ್​ ಪ್ರಾರಂಭಿಸಿರುವುದು ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಂಶುಪಾಲ ಡಾ. ಶಾರದಾ ಮೆಟಗುಡ್​ ಮಾತನಾಡಿ, ಸಮಾಜವು ತೃತೀಯ ಲಿಂಗಿಗಳನ್ನು ಸ್ವೀಕಾರ ಮಾಡದೇ ಇದ್ದಾಗ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಅವರು ಮಾನಸಿಕ ವ್ಯಥೆಗೆ ಒಳಗಾಗುತ್ತಾರೆ. ಹಾಗಾಗಿ ಅವರಿಗೆ ಮೊದಲು ಸಾಂತ್ವನ ಬೇಕಾಗಿದೆ. ಆರೋಗ್ಯ ಸೌಲಭ್ಯ ನೀಡಬೇಕಾಗಿದೆ. ಇದಕ್ಕಾಗಿ ಸಿಬ್ಬಂದಿಯನ್ನು ತರಬೇತುಗೊಳಿಸಲಾಗಿದೆ ಎಂದರು.
ಅತಿಥಿಯಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಡಾ. ಎಚ್​.ಎಚ್​. ಕುಕನೂರ ಮಾತನಾಡಿ, ಕೆಎಲ್​ಇ ಮಾಡಿರುವ ಈ ಕಾರ್ಯವು ಸ್ವಾಗತಾರ್ಹವಾಗಿದೆ. ಇಲಾಖೆಯಿಂದಲೂ ತೃತೀಯ ಲಿಂಗಿಗಳ ಅಭಿವೃದ್ಧಿಗೆ ಅನೇಕ ಯೋಜನೆಗಳು ಇವೆ. ಅವುಗಳ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಅವರ ಆರೋಗ್ಯ ಕಾಳಜಿ ವಹಿಸಲು ಮುಂದೆ ಬಂದಿರುವ ಕೆಎಲ್​ಇ ಸೌಲಭ್ಯಗಳನ್ನು ಸಮುದಾಯದವರು ಬಳಸಿಕೊಳ್ಳಬೇಕು ಎಂದರು.
ಕೆಎಲ್​ಇ ನಿರ್ದೇಶಕ ಡಾ. ವಿ.ಎಸ್​. ಸಾಧುನವರ ಮಾತನಾಡಿದರು. ಆಸ್ಪತ್ರೆ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ವಿ.ಡಿ. ಪಾಟೀಲ, ಸಾಥಿ ಉಪಾಧ್ಯಕ್ಷ ಡಾ. ಎಲ್​. ರಾಮಕೃಷ್ಣನ್​, ಏರ್​ ಕಮಾಂಡರ್​ ಡಾ. ಸಂಜಯ ಶರ್ಮಾ, ನಿರ್ದೇಶಕ ಡಾ. ಎಂ.ಜಿ. ಹಿರೇಮಠ, ಡಾ. ಅರುಣ ಕುಮಾರ, ಡಾ. ಸಮೀರ್​ ದೇಸಾಯಿ, ಸಹಾಯಕ ಪ್ರಾಧ್ಯಾಪಕಿ ಡಾ. ನಮ್ರತಾ, ಗಣ್ಯರು ಉಪಸ್ಥಿತರಿದ್ದರು.
ಡಾ. ಕಾಶವ್ವ ಅಂದಾನಿಗೌಡರ ಕಾರ್ಯಕ್ರಮ ನಿರೂಪಿಸಿದರು. ಕಮ್ಯೂನಿಟಿ ಮೆಡಿಸಿನ್​ ವಿಭಾಗದ ಮುಖ್ಯಸ್ಥ ಡಾ. ಸೌರಭ ಕುಮಾರ, ಡಾ. ರಿಜ್ವಾನ್​ ಶೇಖ್​, ಡಾ. ಅಮೃತ ಡಂಬಳ, ಗಂಗಾ ಪಿಳ್ಳೆ ಇತರರು ನಿರ್ವಹಿಸಿದರು.