ಹುಬ್ಬಳ್ಳಿ ನಗರದ (title deed) ಸೆಟ್ಲಮೆಂಟ್ ಶಾಂತಿನಿಕೇತನ ಕಾಲನಿ ನಿವಾಸಿಗಳು ಶಾಸಕ ಪ್ರಸಾದ ಅಬ್ಬಯ್ಯ ಅವರನ್ನು ಸನ್ಮಾನಿಸಿದರು. ಶ್ರೀನಿವಾಸ ಬೆಳದಡಿ, ಸುಬಾನಿ ಮಲ್ಲಾಡ, ಯಮನೂರ ಗುಡಿಯಾಳ, ಮೈಲಾರಪ್ಪ ಗದಗ, ಸುರೇಶ ಗಾಯಕವಾಡ, ಇತರರು ಇದ್ದರು.
ಹುಬ್ಬಳ್ಳಿ: ಇತ್ತೀಚೆಗೆ ಹಕ್ಕು ಪತ್ರ (Title deed) ಪಡೆದ ನಗರದ ಸೆಟ್ಲಮೆಂಟ್ ಶಾಂತಿನಿಕೇತನ ಕಾಲನಿ ನಿವಾಸಿಗಳು ಶತಮಾನದ ಸಾಧನೆ ಹೆಸರಿನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಹಕ್ಕಿಗಾಗಿ ಕಾಯುತ್ತಿದ್ದ ಜನರ ತಾಳ್ಮೆ, ಹೋರಾಟ ಮತ್ತು ವಿಶ್ವಾಸದ ಗೆಲುವು. ಬಡವರ ಮನೆಗೆ ಕಾನೂನುಬದ್ಧ ಹಕ್ಕು ದೊರಕಿಸುವುದು ಜನಪ್ರತಿನಿಧಿಯಾಗಿ ನನ್ನ ಕರ್ತವ್ಯ. 362 ಕುಟುಂಬಗಳ ಕೈಗೆ ಹಕ್ಕುಪತ್ರ ತಲುಪಿರುವುದು ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಕ್ಷಣ ಎಂದರು.
ಒಂದು ಮನೆ ಎಂದರೆ ಕೇವಲ ನಾಲ್ಕು ಗೋಡೆಗಳಲ್ಲ. ಅದು ಒಂದು ಕುಟುಂಬದ ಭದ್ರತೆ, ಮಕ್ಕಳ ಭವಿಷ್ಯ ಹಾಗೂ ತಲೆಮಾರುಗಳ ಕನಸು. ಇಷ್ಟು ವರ್ಷಗಳಿಂದ ಈ ಮನೆ ನಮ್ಮದೇ ಎಂಬ ಭಾವನೆಯಿದ್ದರೂ ದಾಖಲೆಗಳ ಕೊರತೆಯಿಂದ ಆತಂಕದಲ್ಲಿದ್ದ ಕುಟುಂಬಗಳಿಗೆ ಇಂದು ಆ ಭದ್ರತೆ ದೊರೆತಿದೆ. ಈ ಹಕ್ಕುಪತ್ರ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಲಿದೆ ಎಂದು ಹೇಳಿದರು.
ಶತಮಾನದಷ್ಟು ಹಳೆಯ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ಅಧಿಕಾರಿಗಳು, ಇಲ್ಲಿನ ಮುಖಂಡರರೊಂದಿಗೆ ನಿರಂತರ ಚರ್ಚೆ, ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಹಾಗೂ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇದನ್ನು ಸಾಕಾರಗೊಳಿಸಲಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಈಗಾಗಲೇ 2 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಮನೆಗಳ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಮುಂದೆಯೂ ಹಕ್ಕುಪತ್ರ, ಮನೆ, ಮೂಲಸೌಕರ್ಯ ಹಾಗೂ ಬಡವರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ ಬೆಳದಡಿ, ಸುಬಾನಿ ಮಲ್ಲಾಡ, ಯಮನೂರ ಗುಡಿಯಾಳ, ಮೈಲಾರಪ್ಪ ಗದಗ, ಸುರೇಶ ಗಾಯಕವಾಡ, ಜಗದೀಶ ಬಳ್ಳಾರಿ, ಶರೀಫ್ಅದ್ವಾನಿ, ರವಿ ಬೆಜವಾಡ, ಶಂಕರ ಸಿಂಗನಳ್ಳಿ, ನಾಶೀರ ಅಸುಂಡಿ, ಪವನ ಬೆಜವಾಡ, ಮುಸ್ತಾಕ ಅತ್ತಾರ, ಗುರುನಾಥಸ್ವಾಮಿ, ದೇವೇಂದ್ರ ಭಜಂತ್ರಿ, ತುಕಾರಾಂ ಬಳ್ಳಾರಿ ಇತರರಿದ್ದರು.