ಧಾರವಾಡ ಡಯಟ್ ನಲ್ಲಿ `ವೃತ್ತಿ ಮಾರ್ಗದರ್ಶನ ಕೈಪಿಡಿ' ಬಿಡುಗಡೆ ಮಾಡಲಾಯಿತು.
ಧಾರವಾಡ: ವಿದ್ಯಾರ್ಥಿಗಳ ಬದುಕಿನಲ್ಲಿ ಸರಿಯಾದ ಮಾರ್ಗದರ್ಶನ ಮತ್ತು ಸಕಾಲಿಕ ನಿರ್ಧಾರಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಇವುಗಳೇ ಯಶಸ್ವಿ ಬದುಕಿನ ದಾರಿದೀಪಗಳಾಗಿದ್ದು, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಅಭಿರುಚಿ ಹಾಗೂ ಗುರಿಗೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸಿದ್ಧಪಡಿಸಲಾದ `ವೃತ್ತಿ ಮಾರ್ಗದರ್ಶನ ಕೈಪಿಡಿ'ಯನ್ನು ಡಯಟ್‌ನ ಅಪರ ಆಯುಕ್ತರ ಕಚೇರಿಯಲ್ಲಿ ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ವೃತ್ತಿ ಆಯ್ಕೆಗೆ ಸಂಬಂಧಿಸಿದಂತೆ ಹಲವು ಗೊಂದಲಗಳನ್ನು ಎದುರಿಸುತ್ತಿದ್ದಾರೆ. ವೈದ್ಯಕೀಯ, ಇಂಜಿನಿಯರಿಂಗ ಸೇರಿ ಕೆಲವೇ ವೃತ್ತಿಗಳತ್ತ ಹೆಚ್ಚಿನ ಒಲವು ಕಂಡುಬರುತ್ತಿದೆ. ಆದರೆ, ಇಂದಿನ ದಿನಗಳಲ್ಲಿ ವಿಜ್ಞಾನ, ವಾಣಿಜ್ಯ, ಕಲೆ, ಕೃಷಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಮಾಹಿತಿ ತಂತ್ರಜ್ಞಾನ ಸೇರಿ ಅನೇಕ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿದ್ದು, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಸೂಕ್ತ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು `ಅಭಿರುಚಿ, ಸಾಮರ್ಥ್ಯ, ಅವಕಾಶ ಮತ್ತು ಯಶಸ್ಸು' ಎಂಬ ನಾಲ್ಕು ಪ್ರಮುಖ ಅಂಶಗಳ ಆಧಾರದಲ್ಲಿ ಈ ಕೈಪಿಡಿ ಸಿದ್ಧಪಡಿಸಲಾಗಿದೆ. ವೃತ್ತಿ ಆಯ್ಕೆ, ಉನ್ನತ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ವಿವಿಧ ಉದ್ಯೋಗಾವಕಾಶಗಳ ಕುರಿತು ಸಮಗ್ರ ಮಾಹಿತಿ ಒದಗಿಸುವ ದಿಕ್ಸೂಚಿಯಾಗಲಿದೆ. ಗುರಿ ಸಾಧನೆಗೆ ಯೋಜನೆ ರೂಪಿಸಿಕೊಳ್ಳಲು ಕೈಪಿಡಿ ಸಹಕಾರಿ ಎಂದು ಹೇಳಿದರು.
ಮಕ್ಕಳ ಮೇಲೆ ತಮ್ಮ ನಿರೀಕ್ಷೆಗಳನ್ನು ಹೇರದೆ, ಅವರ ಆಸಕ್ತಿ, ಸಾಮರ್ಥ್ಯ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಅಪರ ಆಯುಕ್ತರ ಕಚೇರಿಯ ಉಪನಿರ್ದೇಶಕ (ಅಭಿವೃದ್ಧಿ) ಗಿರೀಶ್ ಪದಕಿ, ಡಯಟ್ ಪ್ರಾಚಾರ್ಯ ಬಸವರಾಜ ನಾಲತವಾಡ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಅಧಿಕಾರಿಗಳು, ಉಪನ್ಯಾಸಕರು ಹಾಗೂ ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.