ಟೈ ಹುಬ್ಬಳ್ಳಿ (Tiecon-26) ವತಿಯಿಂದ ಆಯೋಜಿಸಿರುವ ಟೈಕಾನ್-26 ಉದ್ಯಮ ಸಮಾವೇಶದ ಪೋಸ್ಟರ್ ಅನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅನಾವರಣಗೊಳಿಸಲಾಯಿತು. ಗಿರೀಶ ಮಾನೆ, ವಿಶಾಲ ನಾಡಗೌಡ, ಗೌರವ ಶಾ, ಸಂತೋಷ ಕಂಠಿ, ಡಾ, ವಿವೇಕ ಪಾಟೀಲ, ವೆಂಕಟೇಶ, ಪ್ರಭಾ ಹಂದಿಗೋಳ ಇದ್ದರು.
ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ (Tiecon-26) ವೇಗವಾಗಿ ಬೆಳೆಯುತ್ತಿರುವ ಉದ್ಯಮಶೀಲತೆ ಹಾಗೂ ನಾವೀನ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಟೈ (ದಿ ಇಂಡಸ್ ಎಂಟರ್ಪ್ರಿನ್ಯೂರ್ಸ್) ಹುಬ್ಬಳ್ಳಿ ಶಾಖೆ ವತಿಯಿಂದ ಮಾ. 14 ಹಾಗೂ 15ರಂದು ಇಲ್ಲಿಯ ಹೋಟೆಲ್ ಡೆನಿಸನ್ಸ್ನಲ್ಲಿ ಉದ್ಯಮ ಸಮಾವೇಶ-ಟೈಕಾನ್ 2026 ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಚಾಲಕ ವಿಶಾಲ ನಾಡಗೌಡ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಂಗವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಬೆಳಗ್ಗೆ 10 ಗಂಟೆಗೆ ಸಮಾವೇಶಕ್ಕೆ ಚಾಲನೆ ನೀಡಲಾಗುವುದು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸಮಾವೇಶದಲ್ಲಿ ಉದ್ಯಮಿಗಳಾದ ಜಾನ್ ಕುರುವಿಲ್ಲಾ, ಅಲಿನಾ ಆಲಂ, ಪ್ರಣವ ಮಹಾಜಾನಿ, ಡಾ. ಶಾಲಿನಿ ನಲ್ವಾಡ, ರೂಮಾ ದೇವಿ, ವಿದ್ಯಾ ಮುರ್ಕಂಬಿ, ವಚನಾ ಶೆಟ್ಟಿ, ರೋಹಿತ್ ಭಟ್, ಕೆ. ಟಿ. ಉಪಾಧ್ಯಾಯ, ಉಮೇಶ್ ವಿ., ಮದನ ಪದಕಿ ಮತ್ತು ಡಾ. ಸಂಜಯ ಅರೋರಾ ತಮ್ಮ ಅನುಭವ, ವಿಷಯ ಹಂಚಿಕೊಳ್ಳುವರು ಎಂದು ತಿಳಿಸಿದರು.
ಎರಡು ದಿನಗಳ ಸಮಾವೇಶದಲ್ಲಿ ಚರ್ಚೆಗಳು, ಸ್ಟಾರ್ಟಪ್ ಪಿಚ್ ಸ್ಪರ್ಧೆಗಳು, ನೆಟರ್ವಂಗ್ ಕಾರ್ಯಚಟುವಟಿಕೆಗಳು ನಡೆಯಲಿವೆ. ಸ್ಟಾರ್ಟಪ್ ಪಿಚ್ ಸ್ಪರ್ಧೆಗೆ ಈ ಬಾರಿ 82 ನವೋದ್ಯಮಿಗಳು ಹೆಸರು ನೋಂದಾಯಿಸಿದ್ದಾರೆ. 15ರಂದು ಸಂಜೆ 6 ಗಂಟೆಗೆ ದಿಗ್ಗಜರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಖ್ಯಾತ ನಟ, ಪ್ರೇರಣಾದಾಯಕ ಭಾಷಣಕಾರ ಆಶಿಶ್ ವಿದ್ಯಾರ್ಥಿ ಪಾಲ್ಗೊಳ್ಳುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಟೈ ಹುಬ್ಬಳ್ಳಿ ಅಧ್ಯಕ್ಷ ಗಿರೀಶ ಮಾನೆ, ಉಪಾಧ್ಯಕ್ಷ ಗೌರವ ಶಾ, ಖಜಾಂಚಿ ಸಂತೋಷ ಕಂಠಿ, ಡಾ, ವಿವೇಕ ಪಾಟೀಲ, ವೆಂಕಟೇಶ, ಪ್ರಭಾ ಹಂದಿಗೋಳ ಇದ್ದರು.