ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಕಳ್ಳರ ಓಡಾಟ. 
ಧಾರವಾಡ

ಮುಸುಕುಧಾರಿ ಕಳ್ಳರ ಕರಾಮತ್ತು

ಮಂಜುನಾಥ ಎಸ್​. ಅಂಗಡಿ ಧಾರವಾಡ
ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಮೂವರು ಮುಸುಕುಧಾರಿ ಕಳ್ಳರು ಕರಾಮತ್ತು ತೋರಿಸುತ್ತಿದ್ದಾರೆ. ಇವರು ಹೊಂಚು ಹಾಕಿ ಮನೆಗಳ್ಳತನ ಮಾಡಿದರೆಂದರೆ ಪ್ರಕರಣ ಭೇದಿಸುವುದು ಪೊಲೀಸರಿಗೂ ಸವಾಲು.
ಈ ಕುಖ್ಯಾತ ಕಳ್ಳರ ತಂಡಕ್ಕೆ ಜನಸಾಮಾನ್ಯರ ಮನೆಯಾಗಲಿ, ನ್ಯಾಯಾಧೀಶರ ಮನೆಯೇ ಅಗಲಿ... ಹೊಂಚು ಹಾಕಿದರೆಂದರೆ ಭರ್ಜರಿ ಕಳ್ಳತನ ಖಾತ್ರಿ. ಆ. 28ರಂದು ರಾತ್ರಿ ವೇಳೆ ಗುರುಕೃಪಾನಗರದ ಕೀಲಿ ಹಾಕಿದ್ದ ನ್ಯಾಯಾಧೀಶರೊಬ್ಬರ ಮನೆಗೆ ಈ ಕಳ್ಳರ ಗ್ಯಾಂಗ್​ ನುಗ್ಗಿತ್ತು. ಮುಖಕ್ಕೆ ಮುಸುಕು ಹಾಕಿಕೊಂಡು ಮನೆಗೆ ನುಗ್ಗಿ ಕಳವು ಮಾಡಿದೆ. ಮನೆಯ ಆವರಣದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಲನವಲನ ದಾಖಲಾಗಿದೆ. ಅಲ್ಲದೆ, ಈ ಪ್ರದೇಶದ 3& 4 ಮನೆಗಳ ಎದುರು ಹಾಕಿರುವ ಸಿಸಿ ಕ್ಯಾಮರಾದಲ್ಲಿ ಕಳ್ಳತ ಓಡಾಟ ಕಂಡುಬಂದಿದೆ. ಅಂದಿನಿಂದ ಪೊಲೀಸರು ಹಗಲಿರುಳು ಕಾರ್ಯಾಚರಣೆ ನಡೆಸುತ್ತಿದ್ದರೂ ಕಳ್ಳರ ಪತ್ತೆ ಸಾಧ್ಯವಾಗಿಲ್ಲ.
* ಊರಿಗೆ ಹೋಗಿದ್ದ ಶಿಕ್ಷಕರು, ಮನೆಗೆ ನುಗ್ಗಿದ ಕಳ್ಳರು:
2025ರ ಜೂನ್​ ಆರಂಭದಲ್ಲಿ ಶಾಲೆಗಳಿಗೆ ಸಾಲುಸಾಲು ರಜೆ ಇದ್ದವು. ಇದೇ ಗ್ರಾಮೀಣ ಠಾಣೆ ವ್ಯಾಪ್ತಿಯ ಕ್ಯಾರಕೊಪ್ಪದ ಜವಾಹರಲಾಲ ನವೋದಯ ವಿದ್ಯಾಲಯದ ಬೇರೆ ಜಿಲ್ಲೆಗಳ ಶಿಕ್ಷಕರೂ ರಜೆ ಇದ್ದುದರಿಂದ ವಸತಿಗೃಹಗಳಿಗೆ ಕೀಲಿ ಹಾಕಿ ಹೋಗಿದ್ದರು. ಇದನ್ನು ಗಮನಿಸಿದ ಚಾಲಾಕಿ ಕಳ್ಳರು ಒಂದೇ ದಿನ ಮೂರು ಮನೆಗಳಿಗೆ ಕನ್ನ ಹಾಕಿದ್ದರು. ಕ್ವಾರ್ಟಸ್​ ಕಾಂಪೌಂಡ್​ ಒಳಗೆ ನುಗ್ಗಿದ್ದ ಕಳ್ಳರು ಮನೆಗಳ ಕೀಲಿ ಮುರಿದು ನಗದು-, ಚಿನ್ನಾಭರಣ ಕದ್ದಿದ್ದರು. ಶಿಕ್ಷಕ ಕುಟುಂಬದವರು ರಜೆ ಮುಗಿಸಿ ವಾಪಸ್​ ಬಂದಾಗಲೇ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ನಗದು, ಚಿನ್ನಾಭರಣ ಕಳ್ಳರ ಪಾಲಾಗಿತ್ತು. ನವೋದಯ ಶಾಲೆ ಆವರಣದ ಸಿಸಿ ಕ್ಯಾಮರಾದಲ್ಲಿ ಕಳ್ಳರ ಚಲನವಲನ ದಾಖಲಾಗಿತ್ತು. ಅದರ ವಿಡಿಯೋ ಸಮೇತ ಶಿಕ್ಷಕರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವರ್ಷವಾದರೂ ಪೊಲೀಸರಿಗೆ ಕಳ್ಳರ ಸುಳಿವು ಸಿಕ್ಕಿಲ್ಲ.
* ದೇವಿ ಮೂತಿರ್ಯ ಆಭರಣಚನ್ನೂ ಬಿಡದ ಚೋರರು:
2025ರ ನವೆಂಬರ್​ನಲ್ಲಿ ಇದೇ ಗ್ರಾಮೀಣ ಠಾಣೆ ವ್ಯಾಪ್ತಿಯ ಮುರಕಟ್ಟಿ ಗ್ರಾಮದ ದುರ್ಗಾ ದೇವಿ ದೇವಸ್ಥಾನದಲ್ಲಿ ಕಳ್ಳತನ ನಡೆದಿತ್ತು. ದೇಗುಲದ ಬಾಗಿಲ ಕೀಲಿ ಮುರಿದು ಒಳನುಗ್ಗಿದ್ದ ಕಳ್ಳರು ದೇವಿ ಮೂತಿರ್ಯ ಮೇಲಿದ್ದ ಸುಮಾರು 14 ತೊಲೆ ಬಂಗಾರದ ಆಭರಣ ಕದ್ದಿದ್ದರು. ಈ ಕುರಿತು ಗ್ರಾಮಸ್ಥರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈವರೆಗೂ ಈ ಪ್ರಕರಣ ಇತ್ಯರ್ಥಗೊಂಡಿಲ್ಲ.
ಸಣ್ಣ ಸುಳಿವು ಆಧರಿಸಿ ಅನೇಕ ಕೊಲೆ, ಪ್ರಕರಣಗಳನ್ನು ಭೇದಿಸಿರುವ ಹೆಮ್ಮೆ ಗ್ರಾಮೀಣ ಠಾಣೆ ಪೊಲೀಸರದು. ಆದರೆ, ಅನೇಕ ಮನೆಗಳ್ಳತನ ಪ್ರಕರಣಗಳ ಬೆನ್ನು ಬಿದ್ದರೂ ಭೇದಿಸಲಾಗುತ್ತಿಲ್ಲ.
ಕಳ್ಳರಿಗೆ ವರವಾಗುವ ಮಾಲೀಕರ ತಪ್ಪುಗಳು
ಮನೆ ಮಾಲೀಕರು ವಾರಗಟ್ಟಲೇ ಮನೆ ಬಾಗಿಲಿಗೆ ಕೀಲಿ ಹಾಕಿ ಹೋದರೂ ಬೀಟ್​ ಪೊಲೀಸರಿಗೆ ಮಾಹಿತಿ ನೀಡುವುದಿಲ್ಲ. ಮನೆ ಬಾಗಿಲಿಗೆ ಕೀಲಿ ಹಾಕಿ ಹೂದಾನಿ, ಕಾಲೊರೆಸುವ ಮ್ಯಾಟ್​ ಅಡಿ ಮನೆಯ ಕೀಲಿಕೈ ಇಟ್ಟು ಹೋಗುವುದು, ಮನೆಯ ಬಾಗಿಲ ಬಳಿ ಧೂಳು ತಿನ್ನುತ್ತ ಬಿದ್ದಿರುವ ದಿನಪತ್ರಿಕೆಗಳು ಮತ್ತು ಅಕ್ಕಪಕ್ಕದವರಿಗೂ ತಿಳಿಸದೆ ಪ್ರವಾಸ& ಬೇರೆ ಊರಿಗೆ ಹೋಗುವುದು ಹಾಗೂ ಸಿಸಿ ಕ್ಯಾಮರಾ ಅಳವಡಿಸದಿರುವುದು ಕಳ್ಳತನಕ್ಕೆ ದಾರಿ ಮಾಡಿಕೊಟ್ಟಂತೆ ಎನ್ನುತ್ತಾರೆ ಹಿರಿಯ ಪೊಲೀಸ್​ ಅಧಿಕಾರಿಗಳು.