ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಳೆದ ಹತ್ತು ದಿನಗಳ ಹಿಂದೆ ಕಾಣಿಸಿದ್ದ ಚಿರತೆ. leopard
- ಜನತೆಯಲ್ಲಿ ಆತಂಕ ಹೆಚ್ಚಾಗಿದೆ.
- ಚಿರತೆ ಸೆರೆಗೆ ಕಸರತ್ತು ನಡೆಸುತ್ತಿರುವ ಅರಣ್ಯ ಇಲಾಖೆ.
- ಮೈಸೂರಿನಿಂದ ಮತ್ತೊಂದು ಬೋನು ತರಿಸಲಾಗಿದೆ.
ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ ಕ್ಯಾಮರಾ ಟ್ರಾ್ಯಪ್ಗಳಲ್ಲಿ ಕಂಡಿರುವ ಚಿರತೆಯ ದೇಹದ ರಚನೆ ಆಧರಿಸಿ ವನ್ಯಜೀವಿ ವೈದ್ಯಾಧಿಕಾರಿಗಳು ಈ ಮಾಹಿತಿ ಪತ್ತೆ ಹಚ್ಚಿದ್ದಾರೆ.
ಮಲೆ ಮಹಾದೇಶ್ವರ ಬೆಟ್ಟದಲ್ಲಿ ಭಕ್ತರೊಬ್ಬರ ಮೇಲೆ ಚಿರತೆ ದಾಳಿ ನಡೆಸಿ, ಸಾಯಿಸಿರುವ ಸುದ್ದಿ ಹರಡುತ್ತಿದ್ದಂತೆಯೇ ಈ ಭಾಗದ ಜನತೆಯಲ್ಲಿ ಆತಂಕ ಹೆಚ್ಚಾಗಿದೆ.
ಅಂದಾಜು ಒಂದು ತಿಂಗಳಿನಿಂದ ಚಿರತೆ ಸೆರೆಗೆ ಹಲವಾರು ಕಸರತ್ತು ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗೂ ಚಿರತೆ ಪತ್ತೆಯಾಗದಿರುವುದು ತಲೆನೋವಾಗಿ ಪರಿಣಮಿಸಿದೆ.
ಈಗಾಗಲೇ ಬನ್ನೇರುಘಟ್ಟ ಹಾಗೂ ಮೈಸೂರಿನಿಂದ ಚಿರತೆ ಕಾರ್ಯಾಚರಣೆ ಪಡೆ ತರಿಸಿರುವ ಅರಣ್ಯ ಇಲಾಖೆ, ಸೋಮವಾರ ಮತ್ತು ಮಂಗಳವಾರ ರಾತ್ರಿಯಿಡಿ, ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಆದರೂ, ಚಿರತೆ ಪತ್ತೆಯಾಗಿಲ್ಲ. ಈಗಾಗಲೇ ಈ ಭಾಗದಲ್ಲಿ ಚಿರತೆ ಸೆರೆಗಾಗಿ ಮೂರು ಬೋನುಗಳನ್ನು ಇಟ್ಟಿದ್ದು, ಬುಧವಾರ ಮೈಸೂರಿನಿಂದ ಮತ್ತೊಂದು ಬೋನು ತರಿಸಲಾಗಿದೆ.
ಚಿರತೆ ಸೆರೆಗಾಗಿ ಕೂಂಬಿಂಗ್ ಸಹ ನಡೆಸಿದ್ದು, ಮತ್ತೆ ಅಗತ್ಯ ಬಿದ್ದರೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುವುದು ಎಂದು ಡಿಸಿಎಫ್ ಅಲಿಮ್ ಸಿದ್ದಿಕ್ಕಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಅಂದಾಜು ಎರಡು ವರ್ಷಗಳ ಹಿಂದೆ ಇಲ್ಲಿನ ನೃಪತುಂಗ ಬೆಟ್ಟದಲ್ಲಿ ಪತ್ತೆಯಾಗಿದ್ದ ಚಿರತೆ, ಸೆರೆಯಾಗಿರಲಿಲ್ಲ. ಆದರೆ, ಧಾರವಾಡದಲ್ಲಿ ಸೆರೆಯಾಗಿದ್ದ ಚಿರತೆಯೇ ಹುಬ್ಬಳ್ಳಿಯಲ್ಲಿನದ್ದು ಇರಬಹುದು ಎಂದು ಅಂದಾಜಿಸಲಾಗಿತ್ತು.
ಹೀಗಾಗಿ, ವಿಮಾನ ನಿಲ್ದಾಣದಲ್ಲಿ ಕಂಡಿರುವ ಚಿರತೆ, ನೃಪತುಂಗ ಬೆಟ್ಟದಲ್ಲಿ ಕಾಣಿಸಿಕೊಂಡಿದ್ದಾ ಅಥವಾ ಇದು ಬೇರೆ ಚಿರತೆಯೋ ಎಂಬುದಕ್ಕೆ ಯಾವುದೇ ರೀತಿಯ ಸ್ಪಷ್ಟ ಉತ್ತರ ಅರಣ್ಯ ಇಲಾಖೆ ಬಳಿ ಇಲ್ಲ.
ಈ ಮಧ್ಯೆ ಚಿರತೆ ಸತ್ತೂರು, ನವನಗರಗಳಲ್ಲಿ ಓಡಾಡುತ್ತಿದೆ ಎಂಬು ಸುಳ್ಳು ಸುದ್ದಿಗಳು ಹರಡುತ್ತಿದ್ದು, ಯಾವುದೇ ವದಂತಿ ನಂಬದಂತೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.