ಹುಬ್ಬಳ್ಳಿ: ನಗರದ ವಿವಿಧ ಬಡಾವಣೆ, ಗಲ್ಲಿಗಳಲ್ಲಿ ಪ್ರತಿಷ್ಠಾಪನೆಯಾಗಿದ್ದ ವಿರಾಟರೂಪ ಶ್ರೀಗಣೇಶನ ವಿಗ್ರಹಗಳ ವಿಸರ್ಜನೆ ಮೆರವಣಿಗೆ ಎರಡು ದಿನ ಭಕ್ತಸಮೂಹದ ಮಧ್ಯೆ ಸಂಭ್ರಮದಿಂದ ನಡೆಯಿತು.
12 ದಿನಗಳ ಕಾಲ ನಗರದಲ್ಲಿ ವಿಜೃಂಭಿಸಿದ್ದ ಗಣೇಶ ಉತ್ಸವಕ್ಕೆ ತೆರೆ ಎಳೆಯಲಾಯಿತು. ಮಧ್ಯಾಹ್ನದಿಂದ ಆರಂಭವಾಗಿದ್ದ 100ಕ್ಕೂ ಹೆಚ್ಚು ಗಣೇಶ ವಿಗ್ರಹಗಳ ಮೆರವಣಿಗೆ ತಡರಾತ್ರಿವರೆಗೂ ನಡೆಯಿತು. ಇಲ್ಲಿಯ ಹೊಸೂರ ಬಾವಿ ಹಾಗೂ ಇಂದಿರಾ ಗಾಜಿನ ಮನೆ ಬಳಿಯ ಬಾವಿಯಲ್ಲಿ ಮಧ್ಯರಾತ್ರಿ ತನಕ ಬಹಳಷ್ಟು ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು.
ಆದರೆ, ಹುಬ್ಬಳ್ಳಿಯ ಮರಾಠಾ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ್ದ ಹುಬ್ಬಳ್ಳಿ ಕಾ ಮಹಾರಾಜ 25 ಅಡಿ ಎತ್ತರದ ಗಣೇಶ ಸೇರಿ ಕೆಲವು ಗಣಪತಿ ವಿಗ್ರಹವನ್ನು ಬೆಳಗಿನ ಜಾವದ ವರೆಗೂ ಮೆರವಣಿಗೆ ಮಾಡಲಾಯಿತು.
ರಾತ್ರಿ 10 ಗಂಟೆ ವೇಳೆಗೆ ಡಿಜೆ ಬಂದ್ ಮಾಡಿಸಲಾಗಿತ್ತು. ನಂತರದಲ್ಲಿ ಜಾಂಜ್ ಪಥಕ್, ವಿವಿಧ ವಾದ್ಯಮೇಳಗಳ ಸಂಗೀತದ ಮಧ್ಯೆ ಯುವಕರು ಸೇರಿ ಎಲ್ಲರೂ ನೃತ್ತ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು.
ಮರುದಿನ ಬೆಳಗ್ಗೆ ಹೊಸೂರ ಮುಂತಾದ ಕಡೆಗಳಲ್ಲಿ ಬೃಹತ್ ವಿಗ್ರಹ ಸುಗಮವಾಗಿ ಸಾಗಲು ಒಂದಿಷ್ಟು ಸಮಸ್ಯೆಯಾದ ಕಾರಣ ತಡವಾಗಿ ವಿಸರ್ಜನೆ ಕಾರ್ಯಕ್ರಮಗಳು ನಡೆದವು.
ಬೃಹತ್ ಮೂರ್ತಿಯನ್ನು ಹೊಸೂರ ಬಾವಿಯಲ್ಲಿ ಬೆಳಗ್ಗೆ 11ರ ಹೊತ್ತಿಗೆ ವಿಸರ್ಜನೆ ಮಾಡಲಾಯಿತು. ಕ್ರೇನ್ ಬಳಸಿ ಗಣೇಶ ಮೂರ್ತಿಗಳನ್ನು ಬಾವಿಯಲ್ಲಿ ಬಿಡಲಾಯಿತು.
ಬಾವಿಯಲ್ಲಿ ವಿಸರ್ಜನೆ ಮಾಡಿದ ಬಹಳಷ್ಟು ವಿಗ್ರಹಗಳು ತೇಲುತ್ತಿರುವ ದೃಶ್ಯ ಕಂಡು ಬಂದಿತು.