ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ. 
ಧಾರವಾಡ

ರಾಜ್ಯ ಸರ್ಕಾರ ತ್ವರಿತ ನಿರ್ಧಾರ ಕೈಗೊಳ್ಳಲಿ

ರೈತರ ಪ್ರತಿಭಟನೆ ವಿಷಯ : ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯ

ಹುಬ್ಬಳ್ಳಿ : ರೈತರು ಕಷ್ಟದಲ್ಲಿರುವಾಗ ಅವರ ನೆರವಿಗೆ ಬರುವುದು ರಾಜ್ಯ ಸರ್ಕಾರದ ಕರ್ತವ್ಯ. ಎಂಎಸ್​ಪಿ ಹಾಗೂ ಎಸ್​ಎಪಿ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡದೆ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರು ಮತ್ತು ಕಾರ್ಖಾನೆಗಳ ನಡುವಿನ ರಿಕವರಿ ಹಾಗೂ ರೇಟ್ ವಿಚಾರದಲ್ಲಿ ಸ್ಪಷ್ಟವಾದ ಫಾಮುಲಾ ಬಂದರೆ ಮಾತ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ ಎಂದು ಹೇಳಿದರು.

ಕಬ್ಬು ಬೆಳೆಗಾರರ ರಕ್ಷಣೆ ಹಾಗೂ ಎಂಎಸ್​ಪಿಗಾಗಿ ರಚಿಸಲಾಗಿರುವ ಸಮಿತಿಯು ಸೋಮವಾರ ಸಭೆ ಸೇರಲಿದೆ. ಈ ಸಭೆಯಲ್ಲಿ ಎಲ್ಲ ರೈತ ಮುಖಂಡರನ್ನು ಕರೆದು ರ್ಚಚಿಸಿ, ಒಂದು ವಾರದೊಳಗೆ ಸೂಕ್ತ ಪರಿಹಾರ ರೂಪಿಸಲಾಗುವುದು ಎಂದರು.

ಸೇಲ್ ಟ್ಯಾಕ್ಸ್ ಹಾಗೂ ಜಿಎಸ್​ಟಿ ಮುಖಾಂತರ ಸಾವಿರಾರು ಕೋಟಿ ರೂಪಾಯಿ ರಾಜಸ್ವ ರಾಜ್ಯಕ್ಕೆ ಬರುವುದರಿಂದ, ರೈತರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರದ ಪಾತ್ರ ಹಾಗೂ ಜವಾಬ್ದಾರಿ ದೊಡ್ಡದಿದೆ ಎಂದರು.

ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರ ಎಸ್​ಎಪಿ ಜಾರಿ ಮಾಡಬೇಕು. ಇದರಿಂದ ಕಬ್ಬಿನ ಬೆಲೆ ಹಾಗೂ ತೂಕದ ಕುರಿತಾದ ಅಸ್ಪಷ್ಟತೆ ನಿವಾರಣೆಯಾಗಿ ರೈತರಿಗೆ ಸ್ಪಷ್ಟ ಅಂದಾಜು ಸಿಗುತ್ತದೆ. ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ಬೆಂಬಲ ಬೆಲೆ ಹಾಗೂ ಸಕ್ಕರೆ ಉತ್ಪಾದನೆ ಆಧರಿಸಿ ರಾಜ್ಯ ಸರ್ಕಾರವೂ ಬೆಂಬಲ ಬೆಲೆ ಘೋಷಿಸಲು ಕ್ರಮ ಕೈಗೊಳ್ಳಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲ ಬೆಲೆ ನೀಡಿದ್ದರು ಎಂದು ಹೇಳಿದರು.

ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರು ಸೇರಿ ತಾಂತ್ರಿಕ ಸಮಿತಿ ರಚಿಸಬೇಕು. ಪ್ರತಿ ವರ್ಷ ಕಬ್ಬಿನ ದರ ನಿಗದಿ ಕುರಿತು ಗೊಂದಲ ಉಂಟಾಗದಂತೆ, ಸಕ್ಕರೆ ಮಾರಾಟಕ್ಕೆ ಎಂಎಸ್​ಪಿ ಫಾಮುಲಾ ಮತ್ತು ಕಬ್ಬಿನ ಬೆಲೆಗೆ ಒಂದು ನಿರ್ದಿಷ್ಟ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಮಹಾರಾಷ್ಟ್ರದ ಗಡಿಗೆ ಹತ್ತಿರವಿರುವ ಕಬ್ಬು ಬೇರೆಡೆಗೆ ಹೋಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದರು.