ಅಣ್ಣಿಗೇರಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ. ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದರು.
ಅಣ್ಣಿಗೇರಿ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ANNIGERI ) ಡಾ. ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ, ಜನರ ಕುಂದುಕೊರತೆ ಆಲಿಸಿದರು. ಸಮರ್ಪಕ ವಿದ್ಯುತ್ ಪೂರೈಕೆಯಾಗುವುದಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ. ಟಿಟಿ ಚುಚ್ಚುಮದ್ದು ನೀಡುತ್ತಿಲ್ಲ. ಆಸ್ಪತ್ರೆ ಆವರಣದ ತುಂಬ ಜಾಲಿ ಕಂಟಿಗಳು ಬೆಳೆದಿವೆ. ಹುಳು ಹುಪ್ಪಡಿಗಳ ಭಯ ಆವರಿಸಿದೆ ಎಂದು ಜನರು ದೂರಿದರು.
ಬಳಿಕ ಅವರು, ಆದಿವಾಸಿಗಳ ಕಾಲನಿಗೆ ಭೇಟಿ ನೀಡಿ, ಅಲ್ಲಿಯ ಜನರ ಸಮಸ್ಯೆ ಆಲಿಸಿದರು. ನೀವಾದರೂ ನಮ್ಮ 80 ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿ ಸಾಮಾಜಿಕ ಭದ್ರತೆ ಒದಗಿಸಿಕೊಡಬೇಕು ಎಂದು ನಿವಾಸಿಗಳು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಡಾ.ನಾಗಲಕ್ಷ್ಮೀ, ಇದು ಖಾಸಗಿ ಜಮೀನಾಗಿದ್ದು ಸರ್ಕಾರಿ ಸೌಲಭ್ಯ ಕೊಡಲು ಬರುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಆಗಮಿಸಿ ಡಿಸಿ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ವೈದ್ಯಾಧಿಕಾರಿ ಮಂಜುನಾಥ ದಾಸಪ್ಪನವರ, ಜಿಲ್ಲಾ ವೈದ್ಯಾಧಿಕಾರಿ ಎಸ್.ಎಂ. ಹೊನಕೇರಿ, ತಹಸೀಲ್ದಾರ್ ವೈ.ಜಿ. ಗದ್ದಿಗೌಡರ, ಸಿಡಿಪಿಒ ಪಾಟೀಲ, ಠಾಣಾಧಿಕಾರಿ ಉಮಾದೇವಿ, ಯು.ಸಿ. ಗುರಿಕಾರ, ಪಾಟೀಲ, ಹನುಮಂತಪ್ಪ ಕಂಬಳಿ, ಮಂಜುನಾಥ ಮಾಯಣ್ಣವರ, ಸಾಗರ ಕಾಳಪ್ಪನವರ, ನಾಗರಾಜ ದಳವಾಯಿ, ಹುಸೇನ ಬೆಟಗೇರಿ, ಧರ್ಮಣ್ಣ ಹರಂಚಿಕಾರಿ, ಇತರರಿದ್ದರು.