ಮಂಜುನಾಥ ಎಸ್. ಅಂಗಡಿ ಧಾರವಾಡ
ಆಕೆ 68 ವರ್ಷದ ವೃದ್ಧೆ. ಇಬ್ಬರು ಪುತ್ರರು ಹುಬ್ಬಳ್ಳಿಯಲ್ಲಿದ್ದರೆ, ಮೂವರು ಪುತ್ರಿಯರ ಮದುವೆಯಾಗಿದೆ. ಜಮೀನಿನ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಆರೋಗ್ಯವಾಗಿಯೇ ಇದ್ದ ಆಕೆ ಮೇ 3ರಂದು ಏಕಾಏಕಿ ಮೃತಪಟ್ಟಿದ್ದಳು. ಮಕ್ಕಳಿಗೆ ಆಕೆಯ ಸಾವಿನ ಸುದ್ದಿ ಗೊತ್ತಾಗಿದ್ದು ಮೇ 9ರಂದು. ಮನೆಯಲ್ಲಿ ಮೃತದೇಹ ಸಿಕ್ಕಾಗ ಪೊಲೀಸರಿಗೆ ಅನುಮಾನಗಳು ಮೂಡಿದ್ದ್ದವು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಗ್ರಾಮೀಣ ಠಾಣೆ ಪೊಲೀಸರು ಇದು ಕೊಲೆ ಎಂಬುದನ್ನು ಭೇದಿಸಿದ್ದಾರೆ...!
ಧಾರವಾಡ ತಾಲೂಕಿನ ಮುಗದ- ದಡ್ಡಿ ಕಮಲಾಪುರ ರಸ್ತೆ ಪಕ್ಕದ ಜಮೀನಿನ ಮನೆಯಲ್ಲಿ ವಿಶಾಲಾಕ್ಷಿ ಅಗಡಿ (68) ಎಂಬುವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇಬ್ಬರು ಗಂಡು ಮಕ್ಕಳು ಕೆಲಸ ಮಾಡಿಕೊಂಡು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಮಕ್ಕಳು ಪ್ರತಿದಿನ ಕರೆ ಮಾಡಿ ತಾಯಿಯ ಆರೋಗ್ಯ ವಿಚಾರಿಸುತ್ತಿದ್ದರು. ಆದರೆ, ಮೇ 3ರಿಂದ ವಿಶಾಲಾ ಕರೆ ಸ್ವೀಕರಿಸಿರಲಿಲ್ಲ. 9ರಂದು ಮನೆಗೆ ಹೋಗಿ ನೋಡಿದಾಗ ವಿಶಾಲಾಕ್ಷಿ ಮೃತಪಟ್ಟಿದ್ದರು. ಮಕ್ಕಳು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದ್ದರು.
ವಿಶಾಲಾಕ್ಷಿ ಅಗಡಿ ಮನೆಯೊಳಗೆ ಮೃತಪಟ್ಟಿದ್ದರೂ ಮನೆಗೆ ಹೊರಗಡೆಯಿಂದ ಬೀಗ ಹಾಕಲಾಗಿತ್ತು. ಪೊಲೀಸರು ಕೀಲಿ ಮುರಿದು ಒಳಪ್ರವೇಶಿಸಿದಾಗ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು. ಹೊರಗೆ ಕೀಲಿ ಹಾಕಿದ್ದೇಕೆ ಎಂಬ ಸೂಕ್ಷ್ಮತೆಯ ಜಾಡು ಹಿಡಿದು, ಪೊಲೀಸರು ತನಿಖೆ ಕೈಗೊಂಡಿದ್ದರು. ಎಸ್ಪಿ ಗುಂಜನ್ ಆರ್ಯ ಮಾರ್ಗದರ್ಶನಲ್ಲಿ ಗ್ರಾಮೀಣ ಠಾಣೆ ಸಿಪಿಐ ಶಿವಾನಂದ ಕಮತಗಿ ಹಾಗೂ ತಂಡ ಪ್ರಕರಣದ ತನಿಖೆಗಿಳಿದಿತ್ತು. ಕೊಲೆ ಶಂಕೆಯ ಹಿನ್ನೆಲೆಯಲ್ಲಿ ಮೃತಳ ಮರಣೋತ್ತರ ಪರೀಕ್ಷೆ ನಡೆಸಿದಾಗ ತಲೆಗೆ ಹಲ್ಲೆ ಮಾಡಿರುವುದು ಪತ್ತೆಯಾಗಿತ್ತು. ಅತಿ ಸೂಕ್ಷ್ಮ ಸಾಾಧಾರಗಳನ್ನು ಸಂಗ್ರಹಿಸಿದ ಸಿಪಿಐ ಶಿವಾನಂದ ಕಮತಗಿ, ಮಹಾರಾಷ್ಟ್ರದ ಈಚಲಕರಂಜಿ ಮೂಲದ ಬಬನ್ ಸದಾಸಿವ ಜಾವೀರ್ ಎಂಬ ಹಂತಕನನ್ನು ಬಂಧಿಸಿದ್ದಾರೆ.
* ಹಂತಕ ಇಟ್ಟಿಗೆ ಭಟ್ಟಿ ಕಾರ್ಮಿಕ:
ಬಬನ್ ಜಾವೀರ್ ತಾಲೂಕಿನ ಚಿಕ್ಕಮಲ್ಲಿಗವಾಡ ವ್ಯಾಪ್ತಿಯ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ. ಸಂಜೆಯಾಗುತ್ತಲೇ ಈತ ಬೈಕ್ ಏರಿ ಸುತ್ತಾಡುತ್ತಿದ್ದ. ಒಂಟಿ ಮನೆಯನ್ನು ಪತ್ತೆ ಮಾಡಿ ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದ. ಹಂತಕನ ಕಣ್ಣಿಗೆ ಬಿದ್ದಿದ್ದು ವಿಶಾಲಾಕ್ಷಿ ಅಗಡಿ. ಈತ ಮುಗದ& ದಡ್ಡಿಕಮಲಾಪುರ ಮಾರ್ಗದಲ್ಲಿ ಕೊಲೆಗೂ ಮುನ್ನ 3-4 ದಿನ ಓಡಾಡಿದ್ದ. ವಿಶಾಲಾಕ್ಷಿ ಅವರ ಮನೆಯ ಹತ್ತಿರ ಇದ್ದ ಸಣ್ಣ ದೇವಸ್ಥಾನಕ್ಕೂ ಹೋಗಿದ್ದ. ಅಲ್ಲಿ ಪರಿಚಯ ಮಾಡಿಕೊಂಡು ಆಕೆಯ ಬಳಿ ಇದ್ದ ಚಿನ್ನಾಭರಣ ದೋಚಲು ಮುಹೂರ್ತ ಇಟ್ಟಿದ್ದ. ಮೇ 3ರಂದು ರಾತ್ರಿ ವಿಶಾಲಾಕ್ಷಿ ಅವರ ಮನೆಗೆ ಹೋದ ಬಬನ್, ಸುತ್ತಿಗೆಯಿಂದ ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಸುಮಾರು 39 ಗ್ರಾಂ ಚಿನ್ನದ ಸರದೊಂದಿಗೆ ಪರಾರಿಯಾಗಿದ್ದ. ಹೋಗುವಾಗ ಮನೆಗೆ ಹೊರಗಡೆಯಿಂದ ಕೀಲಿ ಹಾಕಿಕೊಂಡು ಕಾಲ್ಕಿತ್ತಿದ್ದ.
* ನೋಟ್ಬುಕ್ನಲ್ಲಿ ನಂಬರ್ ಬರೆದಿದ್ದ ಅಜ್ಜಿ:
ಮೃತ ವಿಶಾಲಾಕ್ಷಿ ಗಡಿ ಮನೆಗೆ ಯಾರೇ ಬಂದರೂ ಅವರ ಮೊಬೈಲ್ ನಂಬರ್ ಪಡೆಯುತ್ತಿದ್ದಳು. ಇದೇರೀತಿ ಹಂತಕನ ನಂಬರ್ ಪಡೆದು ತನ್ನ ಬಳಿ ಇದ್ದ ನೋಟ್ಬುಕ್ನಲ್ಲಿ ಬರೆದಿಟ್ಟಿದ್ದಳು. ಆದರೆ, ಹಂತಕ ಬೇರೆ ಹೆಸರು ಹೇಳಿದ್ದ. ತನಿಖೆ ಕೈಗೊಂಡ ಪೊಲೀಸರಿಗೆ ನೋಟ್ಬುಕ್ನಲ್ಲಿ ಬರೆದಿದ್ದ ಮೊಬೈಲ್ ನಂಬರ್ನ ಟವರ್ ಲೋಕೇಶನ್, ಹತ್ಯೆಯಾದ ದಿನದಂದು ಇದೇ ಸ್ಥಳದಲ್ಲಿ ಪತ್ತೆಯಾಗಿತ್ತು. ವೈಜ್ಞಾನಿಕ ಸಾಕ್ಷಾಧಾರಗಳ ನೆರವಿನಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಸಹಜ ಸಾವು ಎಂದು ಮುಚ್ಚಿಹೋಗಬಹುದಾಗಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರ ಕಾರ್ಯ ನಿಜಕ್ಕೂ ಶ್ಲಾನೀಯ.
"
ಒಂಟಿ ಮನೆಯಲ್ಲಿ ವೃದ್ಧೆಯ ಸಾವಿನ ತನಿಖೆ ನಡೆಸಿದ ಗ್ರಾಮೀಣ ಠಾಣೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಗಲಿರುಳು ಕೆಲಸ ಮಾಡಿದ್ದಾರೆ. ಅತಿ ಸೂಕ್ಷ್ಮ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
— ಗುಂಜನ್ ಆರ್ಯ, ಎಸ್ಪಿ ಧಾರವಾಡ