hijab ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಾನಗರ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಉಪ ಮೇಯರ್ ಸಂತೋಷ ಚವ್ಹಾಣ, ತಿಪ್ಪಣ್ಣ ಮಜ್ಜಗಿ, ಇತರರು.
- ಜಾತಿಯ ಬೀಜವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುತ್ತಿದೆ
- ಯುದ್ಧದ ಕಾರಣ ಪೆಟ್ರೋಲ್, ಡೀಸೆಲ್ ಬೆಲೆ ಸಹಜವಾಗಿ ಏರಿಕೆಯಾಗಿದೆ.
- ಕಾಂಗ್ರೆಸ್ ಧೂಳಿಪಟವಾಗುವುದು ಖಚಿತ
ಹುಬ್ಬಳ್ಳಿ :
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು.
ಮಕ್ಕಳಲ್ಲಿ ಶಿಸ್ತು ಬೆಳೆಸಬೇಕಾದ, ಗುಣಮಟ್ಟದ ಶಿಕ್ಷಣ ನೀಡಬೇಕಿರುವ ಸರ್ಕಾರ ಅವರನ್ನು ಕೋಮಿನ ಆಧಾರದ ಮೇಲೆ ಇಬ್ಭಾಗ ಮಾಡುತ್ತಿದೆ. ವಿದ್ಯಾರ್ಥಿ ಹಂತದಿಂದಲೇ ಜಾತಿಯ ಬೀಜವನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಿತ್ತುತ್ತಿದೆ ಎಂದು ದೂರಿದರು.
ಹಿಂದುಗಳು ಜನಿವಾರ, ರುದ್ರಾಕ್ಷಿ ಹಾಕಿಕೊಳ್ಳಿ ಎಂದು ಸರ್ಕಾರ ಹೇಳಬೇಕಿರುವ ಅವಶ್ಯಕತೆ ಇಲ್ಲ. ಅವುಗಳು ಹಿಂದುಗಳ ಜನ್ಮಸಿದ್ಧ ಹಕ್ಕು.
ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿರುವ ಮುಸ್ಲಿಂರನ್ನು ಸಮಾಧಾನಗೊಳಿಸಲು ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಜಾರಿಗೊಳಿಸಿದೆ ಎಂದರು.
ಯುದ್ಧದ ಕಾರಣ ಪೆಟ್ರೋಲ್, ಡೀಸೆಲ್ ಬೆಲೆ ಸಹಜವಾಗಿ ಏರಿಕೆಯಾಗಿದೆ. ದೇಶದ ಹಿತಾಸಕ್ತಿಗಾಗಿ ಪ್ರಧಾನಿ ಮೋದಿ ಅವರು ಒಂದು ವರ್ಷ ಚಿನ್ನ ಖರೀದಿಸದಂತೆ, ಸಾಮೂಹಿಕ ಸಾರಿಗೆ ಬಳಸುವಂತೆ ಕರೆ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ.
ದೇಶ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾಗ ಈ ಹಿಂದಿನ ಪ್ರಧಾನಿಗಳಾದ ದಿ. ಲಾಲ್ ಬಹದ್ದೂರ ಶಾಸ್ತ್ರಿ ಅವರು ಒಂದು ದಿನ ಉಪವಾಸ ಮಾಡುವಂತೆ, ದಿ. ಮನಮೋಹನ್ ಸಿಂಗ್ ಅವರು ತೈಲದ ಬಳಕೆ ಕಡಿಮೆ ಮಾಡುವಂತೆ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಅವರು ರಾತ್ರಿ 8 ಗಂಟೆಗೆ ಪೆಟ್ರೋಲ್ ಬಂಕ್ ಮುಚ್ಚಲು ಹಾಗೂ ತೈಲ ಬೆಲೆ ಏರಿಕೆಗೆ ಹೊಂದಾಣಿಕೆಯಾಗುವಂತೆ ಜೀವನ ನಡೆಸಲು ಕರೆ ನೀಡಿದ್ದರು. ಆಗ, ಕಾಂಗ್ರೆಸ್ನವರ ಮನಸ್ಥಿತಿ ಎಲ್ಲಿತ್ತು ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಧೂಳಿಪಟವಾಗುವುದು ಖಚಿತ : ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ರಾಜ್ಯದಲ್ಲಿನ ಈಗಿನ ಪರಿಸ್ಥಿತಿ ಗಮನಿಸಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ಜತೆಗೆ, ಕಾಂಗ್ರೆಸ್ ಧೂಳಿಪಟವಾಗುವುದು ಖಚಿತ ಎಂದು ಭವಿಷ್ಯ ನುಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಶಾಲಾ, ಕಾಲೇಜುಗಳಲ್ಲಿ ಹಿಜಾಬ್ಗೆ ಅನುಮತಿ ನೀಡಿ, ಕೇಸರಿ ವಸ್ತ್ರಕ್ಕೆ ಅನುಮತಿ ಕೊಡುವುದಿಲ್ಲವೆಂದು ಹೇಳಿರುವುದು ಸರಿಯಲ್ಲ.
ವಿದ್ಯಾರ್ಥಿಗಳು ಕೇಸರಿ ಶಾಲಾ ಹೊದ್ದುಕೊಂಡು ಶಾಲಾ-ಕಾಲೇಜುಗಳಿಗೆ ಹೋಗುತ್ತಾರೆ. ಸರ್ಕಾರ ಅದೆಷ್ಟು ವಿದ್ಯಾರ್ಥಿಗಳನ್ನು ಬಂಧಿಸುತ್ತದೆ ನೋಡೋಣ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
ಉಪ ಮೇಯರ್ ಸಂತೋಷ ಚವ್ಹಾಣ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಾಜಿ ಶಾಸಕ ಅಶೋಕ ಕಾಟವೆ, ವಿಭಾಗೀಯ ಪ್ರಭಾರಿ ಜಯತೀರ್ಥ ಕಟ್ಟಿ ಇತರರಿದ್ದರು.