ನವಲಗುಂದ ಪಟ್ಟಣದ ಪಂಚಗೃಹ ಹಿರೇಮಠ ಗುರು ಪಟ್ಟಾಧಿಕಾರ ನಿಮಿತ್ತ ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಸೇರಿದಂತೆ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಮಂಗಳವಾರ ಜರುಗಿತು. ಶಾಸಕ ಎನ್.ಎಚ್.ಕೋನರಡ್ಡಿ, ವೀರಬಸವ ದೇವರು, ಮತ್ತಿತರು ಇದ್ದರು.
- ಪಂಚಗೃಹ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ
- ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಆಶೀರ್ವಚನ
- ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ
ನವಲಗುಂದ: ಭಾರತೀಯ ಪುಣ್ಯ ಭೂಮಿಯಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದು ಬಂದಿವೆ. ಅವುಗಳು ಜನ ಸಮುದಾಯದ ಮೇಲೆ ಅಪಾರ ಪ್ರಭಾವ ಬೀರಿವೆ. ನಾಡಿನ ಜನರು ಸಂಸ್ಕೃತಿಯ ಪಾವಿತ್ರೃ ಕಾಪಾಡಿಕೊಂಡು ಬರುವ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ (RAMBHAPURI) ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಪಟ್ಟಣದ ಪಂಚಗೃಹ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಮೌಲ್ಯಗಳ ಸಂರಕ್ಷಣೆಯೇ ಧರ್ಮ ಪೀಠಗಳ ಮೂಲ ಗುರಿಯಾಗಿದೆ. ನೀತಿವಂತರು ನಿರಾಶರಾಗಬಾರದು. ನೋವು ನುಂಗಿ ನಲಿವನ್ನು ತೋರಬೇಕಾಗಿದೆ. ಬಹಳಷ್ಟು ಜನರಿಗೆ ಕರ್ತವ್ಯ ಪ್ರಜ್ಞೆಯಿಲ್ಲ. ನೀತಿ ಸಂಹಿತೆ ಅರಿತವನಿಗೆ ನೆಮ್ಮದಿಯ ಫಲ ಪ್ರಾಪ್ತವಾಗುತ್ತದೆ. ಮನುಷ್ಯ ಸತ್ಯ ಶುದ್ಧವಾದ ಧರ್ಮ ಮಾರ್ಗದಲ್ಲಿ ನಡೆದು ಸುಖ ಶಾಂತಿ ಪಡೆಯಬೇಕಾಗಿದೆ. ವೀರಶೈವ ಧರ್ಮದ ಚಿಂತನೆಗಳು ಬದುಕಿನ ವಿಕಾಸಕ್ಕೆ ಸೋಪಾನವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ‘ಅಸಹನೆ, ಅಸಮಾಧಾನ, ಅತೃಪ್ತಿಯಿಂದ ಬಳಲುತ್ತಿರುವ ಮನುಷ್ಯನಿಗೆ ಧರ್ಮದ ಅರಿವಿನಿಂದ ಬಾಳಿ ಬದುಕಲು ಸಾಧ್ಯವಾಗುತ್ತದೆ. ಮನುಷ್ಯನಲ್ಲಿ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ ಎಂದರು.
ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಮಾತನಾಡಿ, ಜನನ-ಮರಣ ಯಾರನ್ನೂ ಬಿಟ್ಟಿಲ್ಲ. ಹುಟ್ಟು-ಸಾವಿನ ಮಧ್ಯದ ಬದುಕು ಶ್ರೀಮಂತಗೊಳಿಸಿಕೊಳ್ಳಬೇಕಾದದ್ದು ಅವರವರ ಜವಾಬ್ದಾರಿ. ದೊಡ್ಡ ಮನಸು ದೊಡ್ಡ ಗುಣದಿಂದ ದೊಡ್ಡಸ್ತಿಕೆ ಸಿಗುತ್ತದೆ ಎಂದರು.
ಶ್ರೀ ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನ ಜಗದ್ಗುರುಗಳು, ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಯ. ಧರ್ಮ ಸಂಸ್ಕೃತಿ, ಸಭ್ಯತೆ ಸದ್ಗುಣ, ಸಂಸ್ಕಾರ ಜನರ ನಿಜವಾದ ಆಸ್ತಿ. ಹೊರಗಿನ ಸಿರಿ ಸಂಪತ್ತು ನಾಶವಾಗಬಹುದು. ಆದರೆ, ಅಧ್ಯಾತ್ಮ ಸಂಪತ್ತು ಯಾವಾಗಲೂ ಇರುತ್ತದೆ ಎಂದರು.
ಶ್ರೀ ಡಾ. ಚಂದ್ರಶೇಖರ ಜಗದ್ಗುರುಗಳು ಆಶೀರ್ವಚನ ನೀಡಿದರು. ನೇತೃತ್ವ ವಹಿಸಿದ್ದ ಪಂಚಗೃಹ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಮ್ಮ ಪಟ್ಟಾಧಿಕಾರಕ್ಕೂ 5 ಜಗದ್ಗುರುಗಳು ದಯಮಾಡಿಸಿ ಆಶೀರ್ವದಿಸಿದ್ದರು. ಇಂದು ಮತ್ತೆ ನಮ್ಮ ಮಠದ ಪಟ್ಟಾಧಿಕಾರ ಸಮಾರಂಭಕ್ಕೆ ಜಗದ್ಗುರುಗಳು ಆಗಮಿಸಿರುವುದು ಮತ್ತೊಂದು ದಾಖಲೆ ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿದರು. ಸಮಾರಂಭಕ್ಕೂ ಮುನ್ನ ನವಲಗುಂದ ರಾಜ ಬೀದಿಯಲ್ಲಿ ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.
ಶ್ರದ್ಧೆ ನಿಷ್ಠೆ ಮತ್ತು ಅನುಭಾವದಿಂದ ಬದುಕು ನಿರಾಳ. ಸಮರಸದ ನಡೆ, ನುಡಿ ಚೆಂದ. ಸಮರಸವೇ ಸರ್ವ ಸೌಭಾಗ್ಯಕ್ಕೆ ಸೋಪಾನ. ಜಗದೊಡೆಯನ ಧ್ಯಾನ ಮಾಡಿ ಬದುಕಿನಲ್ಲಿ ಶಾಂತಿ ಕಾಣಬೇಕಾಗಿದೆ. ವೀರಶೈವ ಧರ್ಮದ ತತ್ವಗಳ ಪರಿಪಾಲನೆಯಿಂದ ಜೀವನ ಪಾವನಗೊಳ್ಳುತ್ತದೆ.
— ಡಾ. ಚಂದ್ರಶೇಖರ ಜಗದ್ಗುರುಗಳು