ನವಲಗುಂದದಲ್ಲಿ ಬುಧವಾರ ಗುರುತ್ವಾಧಿಕಾರ ಸ್ವೀಕರಿಸಿದ ನವಲಗುಂದ ಪಂಚಗೃಹ ಹಿರೇಮಠದ ನೂತನ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಯವರಿಗೆ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಡಾ. ಚಂದ್ರಶೇಖರ ಶ್ರೀಗಳು, ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು, ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನ ಜಗದ್ಗುರುಗಳು, ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಆರ್ಶೀವದಿಸಿದರು. 
ಧಾರವಾಡ

Sri Rambhapuri: ಒಡೆದ ಮನಸು ಬೆಸೆಯುವುದೇ ಧರ್ಮದ ಗುರಿ

ಪ್ರಮುಖ ಮುಖ್ಯಾಂಶಗಳು

  • ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ
  • ನವಲಗುಂದ ಪಂಚಗೃಹ ಹಿರೇಮಠದ ನೂತನ ಶ್ರೀಗಳ ಶ್ರೀಗುರು ಪಟ್ಟಾಧಿಕಾರ ಮಹೋತ್ಸವ,
  • ಪಂಚ ಪೀಠಾಧಿಪತಿಗಳಿಂದ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿಯವರಿಗೆ ಆಶೀರ್ವಾದ
ನವಲಗುಂದ: ಸಮಾಜದಲ್ಲಿ ಹೆಚ್ಚುತ್ತಿರುವ ಸಂಘರ್ಷಕ್ಕೆ ಅಂತ್ಯ ಹಾಡಿ ಶಾಂತಿ ಸಾಮರಸ್ಯ ಮೂಡಿಸುವ ಕೆಲಸ ಮಠಗಳಿಂದ ನಡೆಯಬೇಕು. ಒಡೆದ ಮನಸುಗಳನ್ನು ಬೆಸೆಯುವುದೇ ನಿಜವಾದ ಧರ್ಮದ ಗುರಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ (Sri Rambhapuri) ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.
ಪಟ್ಟಣದ ಪಂಚಗೃಹ ಹಿರೇಮಠದ ನೂತನ ಶ್ರೀಗಳ ಶ್ರೀಗುರು ಪಟ್ಟಾಧಿಕಾರ ಮಹೋತ್ಸವ, ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಬುಧವಾರ ಆಶೀರ್ವಚನ ನೀಡಿದರು. ‘ವಿಪತ್ತಿನ ಕಾಲದಲ್ಲೂ ಧರ್ಮವನ್ನು ಬಿಡಲಾರದವನು ನಿಜವಾದ ಧರ್ಮಾತ್ಮ. ನದಿ- ಸಮುದ್ರಗಳನ್ನು ಸೇತುವೆ ಮೂಲಕ, ಗುಡ್ಡ-ಬೆಟ್ಟ, ಸುರಂಗ ಮಾರ್ಗ ನಿರ್ಮಿಸಿ ದಾಟಬಹುದು. ಆದರೆ, ಮನದ ಮಧ್ಯೆ ನಿರ್ಮಾಣಗೊಂಡ ಸ್ವಾರ್ಥದ ಗೋಡೆಗಳನ್ನು ದಾಟುವುದು ತುಂಬಾ ಕಷ್ಟ. ಗಾಡಾಂಧಕಾರದಲ್ಲಿ ಮುಳುಗಿದ ಮಾನವರನ್ನು ಎಚ್ಚರಿಸಿ ಜಾಗೃತಿ ಉಂಟು ಮಾಡುವುದೇ ಧಾರ್ಮಿಕ ಕೇಂದ್ರಗಳ ಮುಖ್ಯ ಗುರಿಯಾಗಿದೆ. ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸುತ್ತದೆ’ ಎಂದು ಆಶೀರ್ವದಿಸಿದರು.
ಸಾನ್ನಿಧ್ಯ ವಹಿಸಿದ್ದ  ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ‘ಮಾನವೀಯ ಸಂಬಂಧಗಳನ್ನು ಸದೃಢಗೊಳಿಸಲು ಆಯಾ ಕಾಲಘಟ್ಟಗಳಲ್ಲಿ ಆಚಾರ್ಯರು, ಋಷಿಮುನಿಗಳು, ಸಂತ ಮಹಾಂತರು ಅವತರಿಸಿ ಬಾಳಿಗೆ ಬೆಳಕು ತೋರಿಸಿದ್ದಾರೆ. ಸತ್ಯ, ಶಾಂತಿ, ಸಾಮರಸ್ಯ, ಸೌಹಾರ್ದ, ಧರ್ಮನಿಷ್ಠೆ, ದೇಶ ಭಕ್ತಿ ಬೆಳೆಸುವ ಕಾರ್ಯಗಳನ್ನು ಮಠಗಳು ಮಾಡುತ್ತಿವೆ ಎಂದರು.
ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಆಶೀರ್ವಚನ ನೀಡಿ, ‘ಮರೆಯುವುದು ಮನುಷ್ಯನ ಗುಣ. ಮರೆತು ಹೋದುದನ್ನು ನೆನಪು ಮಾಡಿಕೊಡುವುದೇ ಮಠಗಳ ಕೆಲಸ. ಮಠಗಳು ಸಂಸ್ಕಾರ ಸಚ್ಚಾರಿತ್ರೃ ಬೋಧಿಸುವ ಕೇಂದ್ರಗಳಾಗಬೇಕು ಎಂದರು.
ಕಾಶೀ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶ್ರೀಗಳು, ಯೋಗಿ, ಭೋಗಿ ಮತ್ತು ರೋಗಿ ಯಾವಾಗಲೂ ಎಚ್ಚರವಾಗಿರುತ್ತಾರೆ. ಯೋಗಿ ಸಾಧನೆಗಾಗಿ, ಭೋಗಿ ಇಂದ್ರಿಯ ಸುಖಕ್ಕಾಗಿ, ರೋಗಿ ವೇದನೆಯಿಂದ ಎಚ್ಚರವಾಗಿರುತ್ತಾರೆ. ಅರಿವಿನ ಕಣ್ಣು ತೆರೆಸಲು ಅಜ್ಞಾನ ದೂರ ಮಾಡಲು ಗುರು ಅವಶ್ಯಕ. ವೀರಶೈವ ಧರ್ಮವು ಅಶ್ವತ್ಥ ವೃಕ್ಷ ಇದ್ದಂತೆ ಎಂದರು.
ಕಾಶೀ ನೂತನ ಶ್ರೀಗಳಾದ ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನ ಜಗದ್ಗುರುಗಳು, ಮನುಷ್ಯ ಜೀವನದಲ್ಲಿ ಚತುರ್ವಿಧ ಪುರುಷಾರ್ಥಗಳ ಸಂಪಾದನೆಯಲ್ಲಿ ಒಂದನ್ನಾದರೂ ಗಳಿಸಿಕೊಳ್ಳದಿದ್ದರೆ ಮಾನವ ಜೀವನ ವ್ಯರ್ಥವಾಗುತ್ತದೆ. ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೆ ಬದುಕಲಾಗದು. ಮನುಷ್ಯನ ಮನಸೆಂಬ ಆವೇಶದ ಚಂಚಲದ ಹೊಯ್ದಟವನ್ನು ಪ್ರಶಾಂತಗೊಳಿಸಿ ಸನ್ಮಾರ್ಗಕ್ಕೆ ಕರೆದೊಯ್ಯುವುದೇ ಗುರುವಿನ ಧರ್ಮವಾಗಿದೆ ಎಂದರು.
ನೂತನ ಶ್ರೀಗಳವರಿಗೆ ಹಿರಿಯ ಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳು ಷಟ್‌ಸ್ಥಲ ಬ್ರಹ್ಮೋಪದೇಶ ನೀಡಿ ಗುರುತ್ವ ಅಧಿಕಾರ ಅನುಗ್ರಹಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂಚಗೃಹ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ, ‘ಪರಮಾಚಾರ್ಯರ ಆಶೀರ್ವಾದ ಮತ್ತು ಭಕ್ತರ ಸಹಕಾರ ದೊಡ್ಡದು ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿದರು. ಸುಳ್ಳ, ಶಿರಕೋಳ, ನೆಗಳೂರು, ನವನಗರ, ಹುಬ್ಬಳ್ಳಿ, ಬ್ಯಾಹಟ್ಟಿ, ಮೊರಬದ ಶ್ರೀಗಳು, ಅಣ್ಣಪ್ಪ ಬಾಗಿ, ಸಿದ್ದಲಿಂಗಯ್ಯ ಹಿರೇಮಠ, ಬಾಬಾಜನ ಮುಲ್ಲಾ, ಪಾಂಡಪ್ಪ ಕೋನರಡ್ಡಿ, ಅಪ್ಪಣ್ಣ ಹಳ್ಳದ ಇತರರು ಇದ್ದರು. ನರಗುಂದ ಪಂಚಗೃಹ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನಿರೂಪಿಸಿದರು.

ಅಧ್ಯಾತ್ಮ ಸಂಪತ್ತು ದೊಡ್ಡದು

ನವಲಗುಂದ ಪಂಚಗೃಹ ಹಿರೇಮಠದ ನೂತನ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ‘ಪೂರ್ವ ಜನ್ಮದ ಸುಕೃತ ಮತ್ತು ಸಿದ್ಧೇಶ್ವರ ಶಿವಾಚಾರ್ಯರ ಆಶೀರ್ವಾದದಿಂದ ಶ್ರೀಮಠದ ಪಟ್ಟಾಧ್ಯಕ್ಷನಾಗಿರುವೆ. ವೀರಶೈವ ಧರ್ಮ ಪರಂಪರೆಯ ಆದರ್ಶ ಮೌಲ್ಯಗಳ ಸಂರಕ್ಷಣೆ-ಗುರುಸ್ಥಲದ ಮಹತ್ವವನ್ನು ಅರಿತು ಭಕ್ತ ಸಂಕುಲಕ್ಕೆ ಮಾರ್ಗದರ್ಶನ ಮಾಡುವೆ. ಹೊರಗಿನ ಸಿರಿ ಸಂಪತ್ತಿಗಿಂತ ಅಧ್ಯಾತ್ಮ ಸಂಪತ್ತು ದೊಡ್ಡದು. ಶ್ರೀಜಗದ್ಗುರು ಪಂಚ ಪೀಠಾಧೀಶ್ವರರ ಕೃಪಾಶೀರ್ವಾದದಿಂದ ಶ್ರೀಮಠದ ಅಭಿವೃದ್ಧಿ, ಭಕ್ತರಿಗೆ ಸಂಸ್ಕಾರ ಮತ್ತು ಗುಣಾತ್ಮಕ, ರಚನಾತ್ಮಕ ಕಾರ್ಯಗಳನ್ನು ಮಾಡುತ್ತೇನೆ ಎಂದು ಸಂಕಲ್ಪ ಕೈಗೊಂಡರು.